ರಾಜ್ಯದ ಕರಾವಳಿ-ಮಲೆನಾಡು ಭಾಗದಲ್ಲಿ ಮತ್ತೆ ಸ್ಯಾಟಲೈಟ್​ ಫೋನ್​ ಸಿಗ್ನಲ್​ ಪತ್ತೆ

satellite
Published on

ಮಂಗಳೂರು: ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸ್ಯಾಟಲೈಟ್ ಫೋನ್ ಮತ್ತೊಮ್ಮೆ ರಿಂಗಣಿಸಿದ್ದು, ರಾಜ್ಯ ಆಂತರಿಕ ಭದ್ರತಾ ವಿಭಾಗ(ಐಎಸ್​ಡಿ) ಸ್ಥಳಕ್ಕೆ ತೆರಳಿ ತನಿಖೆ ಕೈಗೆತ್ತಿಕೊಂಡಿದೆ.

ಚಿಕ್ಕಮಗಳೂರಿನ ದಟ್ಟಾರಣ್ಯ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ-ಶಿರಸಿ ನಡುವಿನ ದಟ್ಟಾರಣ್ಯ, ಮಂಗಳೂರು ನಗರದ ಹೊರ ವಲಯದ ನಾಟೆಕಲ್​ ಮತ್ತು ಕುಳಾಯಿ ಬಳಿ ಮೇ 23ರಿಂದ 29ರ ನಡುವೆ ಸ್ಯಾಟಲೈಟ್​ ಫೋನ್​ ಸಿಗ್ನಲ್​ ಸಿಗ್ನಲ್​ ಪತ್ತೆ ಆಗಿರುವುದನ್ನು ಕೇಂದ್ರ ಗುಪ್ತಚರ ಇಲಾಖೆ ಪತ್ತೆ ಮಾಡಿದೆ.

ಕರಾವಳಿ ಹಾಗೂ ಮಲೆನಾಡಿನಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಮೂರು ಬಾರಿ ಸ್ಯಾಟಲೈಟ್​ ಫೋನ್​ ಸಿಗ್ನಲ್​ ಪತ್ತೆಯಾಗಿ ಆತಂಕ ಮೂಡಿಸಿದೆ. ಈ ಹಿಂದೆ ಸಿಗ್ನಲ್​ ಪತ್ತೆಯಾದ ಸಂದರ್ಭ ಗುಪ್ತಚರ ಇಲಾಖೆ ತನಿಖೆ ನಡೆಸಿತ್ತು. ನಿಷೇಧಿತ ಸ್ಯಾಟಲೈಟ್​ ಫೋನ್​ ಬಳಕೆ ಮಾಡಿರುವವರು ಯಾರು? ಎಂಬುದು ನಿಗೂಢವಾಗಿದೆ. ಈ ಕರೆಯ ಮೂಲ? ಯಾಕಾಗಿ ಕರೆ ಮಾಡುತ್ತಾರೆ? ಯಾರು ಕರೆ ಮಾಡುತ್ತಾರೆ? ಎಂಬುದು ಇದುವರೆಗೆ ಪತ್ತೆಯಾಗಿಲ್ಲ. ಭಾರತದಲ್ಲಿ ತುರಾಯ ಸ್ಯಾಟಲೈಟ್​ ಫೋನ್​ ನಿಷೇಧವಿದೆ.

2021ರ ಅಕ್ಟೋಬರನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಕಡೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ 2 ಹಾಗೂ ಉತ್ತರ ಕನ್ನಡ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದ ಒಂದು ಕಡೆ ಸ್ಯಾಟಲೈಟ್ ಫೋನ್ ಆ್ಯಕ್ಟಿವ್​​ ಆಗಿತ್ತು. ರಾಜ್ಯದ ಕರಾವಳಿಯಲ್ಲಿ ಕೇಂದ್ರ ಗುಪ್ತಚರ ಸಂಸ್ಥೆಯ ಹೈ ಅಲರ್ಟ್ ಸೂಚನೆ ನಡುವೆಯೂ ಸ್ಯಾಟಲೈಟ್ ಫೋನ್​ ಆ್ಯಕ್ಟಿವ್​ ಆಗಿತ್ತು. ಇದೀಗ ಮತ್ತೆ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ನಾಲ್ಕು ಕಡೆಗಳಲ್ಲಿ ಸ್ಯಾಟಲೈಟ್​ ಫೋನ್​ ಸಿಗ್ನಲ್​ಗಳು ಪತ್ತೆಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net