ದಂತ ಚಿಕಿತ್ಸೆಗೆ ಹೋದ ಸ್ಯಾಂಡಲ್​ವುಡ್​ ನಟಿಯ ಮುಖವೇ ವಿರೂಪ! ವೈದ್ಯೆ ಎಡವಟ್ಟಿಗೆ ನಲುಗಿದ ನಟಿಯ ಕಷ್ಟ ಹೇಳತೀರದು

actor swati 1
Published on

ಬೆಂಗಳೂರು: ಫ್ಯಾಟ್​ ಸರ್ಜರಿ ಮಾಡಿಸಲು ಹೋಗಿ ಕಿರುತೆರೆ ನಟಿ ಚೇತನಾ ರಾಜ್ ದುರಂತ ಅಂತ್ಯ ಕಂಡ ಬೆನ್ನಲ್ಲೇ ಮತ್ತೊಂದು ಅವಾಂತರ ಸಂಭವಿಸಿದೆ. ದಂತ ಚಿಕಿತ್ಸೆಗೆ ಹೋದ ನಟಿಯ ಮುಖವನ್ನೇ ವಿರೂಪಗೊಳಿಸಲಾಗಿದ್ದು, ದಂತ ವೈದ್ಯೆಯ ಯಡವಟ್ಟಿನಿಂದ ನಟಿಗೆ ಅವಕಾಶಗಳೇ ಇಲ್ಲದಂತಾಗುತ್ತಿದೆ. ನಟಿಯ ಮುಖ ನೋಡಿ ಇನ್ಮುಂದೆ ಕೆಲಸಕ್ಕೆ ಬರಬೇಡಮ್ಮ ಅಂದಿದ್ದಾರಂತೆ ಹಲವರು. ಸಿನಿಮಾದಲ್ಲಿ ನಟಿಸಲೂ ಆಗದೆ, ವಾಯ್ಸ್​ ಡಬ್ಬಿಂಗ್​ ಮಾಡಲೂ ಆಗದೆ ಸದ್ಯ ಕೆಲಸವಿಲ್ಲದೇ ಕಂಗಾಲಾಗಿರು ನಟಿ, ನನಗಾದ ಗತಿ ಮತ್ಯಾರಿಗೂ ಬರೋದು ಬೇಡ ಎಂದು ಕಣ್ಣೀರಿಟ್ಟಿದ್ದಾರೆ.

ಎಫ್ಐಆರ್ 6 ಟು 6 ಸೇರಿ ಹಲವು ಸಿನಿಮಾದಲ್ಲಿ ನಟಿಸಿರುವ ಸ್ವಾತಿ, ಬೆಂಗಳೂರಿನ ಜೆಪಿ ನಗರದಲ್ಲಿ ವಾಸವಿದ್ದಾರೆ. ಹಲ್ಲಿನ ರೂಟ್ ಕ್ಯಾನಲ್​ ಮಾಡಿಸಿಕೊಳ್ಳಲೆಂದು ಸಮೀಪದ ಓರಿಕ್ಸ್ ಡೆಂಟಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಸ್ವಾತಿ ಹೋಗಿದ್ದರು. ಚಿಕಿತ್ಸೆ ಪಡೆದ ಬಳಿಕ ಮುಖದಲ್ಲಿ ಊತ ಕಾಣಿಸಿಕೊಂಡಿತ್ತು. ಎರಡು ದಿನದಲ್ಲಿ ಊತ ಕಮ್ಮಿಯಾಗುತ್ತೆ ಎಂದು ಚಿಕಿತ್ಸೆ ಕೊಟ್ಟ ವೈದ್ಯೆ ಹೇಳಿದ್ದರು. 20 ದಿನ ಕಳೆದರೂ ಮುಖ ಮೊದಲಿನಂತೆ ಆಗಿಲ್ಲ. ಮುಖ ಊತ ಹಾಗೇ ಇದ್ದು, ಒಂದು ಕಣ್ಣು ಮುಚ್ಚಿದಂತಾಗಿದೆ. ತುಟಿಯೂ ಊದಿದೆ. ಆಸ್ಪತ್ರೆಗೆ ಹೀಗಾಗಿದೆ ಅಂತ ಕಾಲ್ ಮಾಡಿದ್ರೆ, 'ನಾನು ಮುಂಬೈಲ್ಲಿ ಇದ್ದೀನಿ' ಅಂತಿದ್ದಾರಂತೆ ವೈದ್ಯರು.

ಮುಖ ವಿರೂಪಗೊಂಡ ಬಳಿಕ ಮನೆಯಿಂದ ಹೊರಬರಲಾರದೆ ತೊಂದರೆ ಅನುಭವಿಸುತ್ತಿರೋ ನಟಿ, ಕೆಲಸವನ್ನೂ ಕಳೆದುಕೊಂಡಿದ್ದಾರೆ. ನಟಿಯ ಮುಖ ನೋಡಿ ಇನ್ಮುಂದೆ ಕೆಲಸಕ್ಕೆ ಬರಬೇಡಮ್ಮ ಅಂದಿದ್ದಾರಂತೆ ಹಲವರು. ಸಿನಿಮಾದಲ್ಲಿ ನಟಿಸಲೂ ಆಗದೆ, ವಾಯ್ಸ್​ ಡಬ್ಬಿಂಗ್​ ಮಾಡಲೂ ಆಗದೆ ಸದ್ಯ ಕೆಲಸವಿಲ್ಲದೇ ಕಂಗಾಲಾಗಿದ್ದಾರೆ. 'ನನಗಾದ ಗತಿ ಬೇರೆ ಯಾರಿಗೂ ಆಗೋದು ಬೇಡ. ದಯವಿಟ್ಟು ಓರಿಕ್ಸ್ ಡೆಂಟಲ್ ಕ್ಲಿನಿಕ್​ಗೆ ಹೋಗಬೇಡಿ' ನಟಿ ಮನವಿ ಮಾಡಿದ್ದಾರೆ. ಸದ್ಯ ಬೇರೆ ಕಡೆ ಸ್ವಾತಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net