

ಬೆಂಗಳೂರು: 'ಸುಳ್ಳು ಹೇಳಬಾರದು’ ಕತೆಯನ್ನು ದಯವಿಟ್ಟು 5ನೇ ತರಗತಿ ಪಠ್ಯದಿಂದ ಕಿತ್ತುಹಾಕಿ ಎಂದು ಬೊಳುವಾರು ಮಹಮದ್ ಕುಂಞಿ ಅವರು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ಗೆ ಪತ್ರಬರೆದಿದ್ದಾರೆ. ಇದೀಗ ಕವಯತ್ರಿ ರೂಪಾ ಹಾಸನ ಕೂಡ ಸಚಿವರಿಗೆ ಪತ್ರ ಬರೆದು 9ನೇ ತರಗತಿಯ ಪರಿಷ್ಕೃತ ಪಠ್ಯದಿಂದ "ಅಮ್ಮನಾಗುವುದೆಂದರೆ'' ಎಂಬ ನನ್ನ ಕವಿತೆಯನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ.
ಮಕ್ಕಳು ಹಾಗೂ ಶೈಕ್ಷಣಿಕ ಹಕ್ಕುಗಳ ರಕ್ಷಣೆಗಾಗಿ ಎರಡು ದಶಗಳಿಂದ ಕಾರ್ಯನಿರ್ವಹಿಸುತ್ತಿರುವ ನಾನು, ಪರಿಷ್ಕೃತಗೊಂಡ ಶಾಲಾ ಪಠ್ಯ ಪುಸ್ತಕಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಮುಖ್ಯವಾಗಿ "ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005''ರ ನೀತಿ ನಿಯಮಗಳಿಗೆ ಅನುಗುಣವಾಗಿ ರೂಪಿತವಾಗಿಲ್ಲದಿರುವುದು ಎದ್ದು ಕಾಣುತ್ತಿದೆ. ಪಠ್ಯಗಳು ವಿಶಾಲ, ಉದಾತ್ತ, ವೈಚಾರಿಕ, ವೈಜ್ಞಾನಿಕ, ಸಹಬಾಳ್ವೆ, ಸಾಮರಸ್ಯದ ಉದ್ದೇಶ ಹೊಂದಿರಬೇಕು. ಪ್ರತಿ ಮಗುವೂ ಪ್ರೀತಿ, ಅಹಿಂಸೆ ಮತ್ತು ಐಕ್ಯತೆಯಿಂದ ಬೆಳೆಯುವಂತೆ, ಮುಕ್ತ ಚಿಂತನೆಯಿಂದ ಕೂಡಿದ ಸಮಚಿತ್ತದ ಪಠ್ಯವನ್ನು ರೂಪಿಸಲು ಆದ್ಯತೆ ನೀಡಬೇಕು. ಆದರೆ, ಈ ಚೌಕಟ್ಟಿನ ಆಶಯಕ್ಕನುಗುಣವಾಗಿ ರಾಜ್ಯದಲ್ಲಿ ಪಠ್ಯ ಮರು ಪರಿಷ್ಕರಣೆ ನಡೆದಿಲ್ಲದಿರುವುದು ಆತಂಕಕಾರಿಯಾಗಿದೆ. ಈ ಎಲ್ಲ ಕಾರಣಗಳಿಂದ ನನ್ನ ಕವಿತೆಯನ್ನು ಬೋಧಿಸಲು ಹಿಂದಿನ ಸಮಿತಿಗೆ ನೀಡಿದ್ದ ಅನುಮತಿಯನ್ನು ಹಿಂಪಡೆಯುತ್ತಿದ್ದೇನೆ ಎಂದು ಕವಯತ್ರಿ ರೂಪಾ ಹಾಸನ ಅವರು ಪತ್ರದಲ್ಲಿ ವಿವರಿಸಿದ್ದಾರೆ.