

ಬೆಂಗಳೂರು: ಪಠ್ಯಪುಸ್ತಕ ರಚನಾ ವ್ಯವಸ್ಥೆ ಕುರಿತು ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಒಂದಿಲ್ಲೊಂದು ರೀತಿಯಲ್ಲಿ ವಾದ-ವಿವಾದಗಳು ಪ್ರಾರಂಭವಾಗಿವೆ. ಈ ಹೊತ್ತಲ್ಲೇ ನಾನು ರಚಿಸಿದ ಕತೆಯನ್ನು ಪಠ್ಯಪುಸ್ತಕದಿಂದ ತೆಗೆಯಿರಿ ಎಂದು ಕನ್ನಡ ಖ್ಯಾತ ಕಥೆಗಾರ ಬೊಳುವಾರು ಮಹಮದ್ ಕುಂಞಿ ಅವರು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ಗೆ ಪತ್ರ ಬರೆದಿದ್ದಾರೆ.
'ಶಿಕ್ಷಣ ಸಚಿವರಿಗೆ ನನ್ನ ಪ್ರಣಾಮಗಳು. ಪ್ರಸಕ್ತ ಸಿರಿ ಕನ್ನಡ–ಪ್ರಥಮ ಭಾಷಾ ಕನ್ನಡ ಪಠ್ಯಪುಸ್ತಕ (ಪರಿಷ್ಕೃತ) 5ನೇ ತರಗತಿ ಪುಸ್ತಕದ 24ನೇ ಪುಟದಲ್ಲಿರುವ ‘ಸುಳ್ಳು ಹೇಳಬಾರದು’ ಎಂಬ ಹೆಸರಿನ ನನ್ನ ಪುಟ್ಟ ಕತೆಯೊಂದರ ಆಶಯಗಳು, ಪ್ರಸಕ್ತ ವರ್ಷದಲ್ಲಿ ಪರಿಷ್ಕೃತಗೊಂಡಿರುವ/ಗೊಳ್ಳಲಿರುವ ಇತರ ಕೆಲವು ಪಠ್ಯಗಳ ಆಶಯಗಳೊಂದಿಗೆ ಸರಿಯಾಗಿ ಹೊಂದಿಕೆ ಆಗದಿರುವ ಸಾಧ್ಯತೆ ಇದೆ. ಹಾಗಾಗಿ ನಮ್ಮ ಪುಟ್ಟ ಮಕ್ಕಳು ಗೊಂದಲಕ್ಕೊಳಗಾಗುವ ಸಾಧ್ಯತೆಯುಂಟು. ಆದ್ದರಿಂದ, ದಯವಿಟ್ಟು ‘ಸುಳ್ಳು ಹೇಳಬಾರದು’ ಎಂಬ ಈ ನನ್ನ ಕತೆಯನ್ನು ಕಿತ್ತು ಹಾಕಿ, ಪರಿಷ್ಕೃತ ಪಠ್ಯ ಕ್ರಮದ ಆಶಯಗಳಿಗೆ ಹೊಂದಿಕೊಳ್ಳುವ ಬೇರೊಂದು ಪಠ್ಯವನ್ನು ಸೇರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತಿದ್ದೇನೆ' ಎಂದು ಬೊಳುವಾರು ಮಹಮದ್ ಕುಂಞಿ ಮನವಿ ಮಾಡಿದ್ದಾರೆ.