ಬೆಂಗಳೂರು: ಸ್ಟಾರ್ ಡೈರೆಕ್ಟರ್ ರಾಜಮೌಳಿ ನಿರ್ದೇಶನದ ಹಾಗೂ ಜೂ. ಎನ್ಟಿಆರ್ ಮತ್ತು ರಾಮ್ಚರಣ್ ನಟನೆಯ ಬಹುನಿರೀಕ್ಷಿತ “ಆರ್ಆರ್ಆರ್” ಸಿನಿಮಾ ಮಾ.25ರಂದು ವಿಶ್ವಾದ್ಯಂತ ತೆರೆ ಕಾಣಲಿದೆ. ಚಿತ್ರತಂಡ ಭರ್ಜರಿ ಪ್ರಚಾರ ನಡೆಸಿದ್ದು, ಮೊನ್ನೆ ಚಿಕ್ಕಬಳ್ಳಾಪುರದಲ್ಲಿ ಸಿನಿಮಾ ಪ್ರೀ–ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿಯೇ ನಡೆದಿದೆ. ಇದೀಗ ಆರ್ಆರ್ಆರ್ ಟೀಂ ಹೊಸ ರಾಗ ತಗೆದಿದ್ದು. RRR ಸಿನಿಮಾ ಕನ್ನಡ ವರ್ಷನ್ ಪ್ರದರ್ಶನ ಮಾಡಲು ಕರ್ನಾಟಕದಲ್ಲಿ ಥಿಯೇಟರ್ ಮಾಲಿಕರು ನಿರಾಸಕ್ತಿ ತೋರುತ್ತಿದ್ದಾರೆ ಎಂದು ಥಿಯೇಟರ್ ಮಾಲೀಕರ ಮೇಲೆ ವಿತರಕರು ಆರೋಪಿಸಿದ್ದಾರೆ.
'RRR ಸಿನಿಮಾ ಮಾ.25ರಂದು ತೆರೆಗೆ ಬರಲು ಸಿದ್ಧವಾಗಿದೆ. ನಾಯಕ ನಟ ರಾಮ್ ಚರಣ್ ಮತ್ತು ಜ್ಯೂ.ಎನ್ಟಿಆರ್ ಅವರು ಕನ್ನಡ ಕಲಿಯಲು ವಿಶೇಷ ಪ್ರಯತ್ನ ಮಾಡಿ ಮೊದಲ ಬಾರಿಗೆ ತಮ್ಮದೇ ಧ್ವನಿಯಲ್ಲಿ ಡಬ್ ಮಾಡಿದ್ದಾರೆ. ನೀವು ಕನ್ನಡ ಭಾಷೆಯಲ್ಲಿ ಈ ಮಹೋನ್ನತ ದೃಶ್ಯಕಾವ್ಯ ನೋಡಲು ಇಷ್ಟಪಡುತ್ತೀರಿ ಎಂದು ನಾನು ಭಾವಿಸಿರುವೆ. ಆದ್ದರಿಂದ RRR ಸಿನಿಮಾವನ್ನು ಕನ್ನಡದ ಅವತರಣಿಕೆಯಲ್ಲಿ ಪ್ರದರ್ಶಿಸಲು ಹಿಂದೇಟು ಹಾಕುತ್ತಿರುವ ಥಿಯೇಟರ್ ಮಾಲೀಕರ ಮನವೊಲಿಸುವ ಕಾರ್ಯ ನಡೆಯುತ್ತಿದೆ. ಕನ್ನಡದ ಅವತರಣಿಕೆಯನ್ನ ಹೆಚ್ಚಿನ ಸ್ಕ್ರೀನ್ಗಳಲ್ಲಿ ಬಿಡುಗಡೆ ಮಾಡಲು ಸತತ ಪ್ರಯತ್ನ ಮಾಡುತ್ತಿದ್ದೇವೆ. ಈ ಬಗ್ಗೆ ನಾಳೆ(ಗುರುವಾರ) ಸಂಪೂರ್ಣ ಮಾಹಿತಿ ನೀಡಲಿದ್ದೇವೆ. RRR ಕನ್ನಡ ಅವತರಣಿಕೆ ವೀಕ್ಷಿಸುವ ಮೂಲಕ ಹಾಗೂ ರಾಜ್ಯದಾದ್ಯಂತ ಹೆಚ್ಚಿನ ಪರದೆಗಳಲ್ಲಿ ಕನ್ನಡ ಆವೃತ್ತಿಯನ್ನೇ ಬಿಡುಗಡೆ ಮಾಡಲು ನಮಗೆ ನೀವು ಸಹಾಯ ಮಾಡುತ್ತೀರಿ, ನಮ್ಮನ್ನು ಬೆಂಬಲಿಸುತ್ತೀರಿ ಎಂದು ಭಾವಿಸಿದ್ದೇವೆ' ಕರ್ನಾಟಕದಲ್ಲಿ ಆರ್ಆರ್ಆರ್ ಸಿನಿಮಾ ವಿತರಣೆ ಜವಾಬ್ದಾರಿ ಹೊತ್ತ ಕೆವಿಎನ್ ಪ್ರೊಡಕ್ಷನ್ ತಿಳಿಸಿದೆ.
ಈ ಕುರಿತು ಅಸಮಾಧಾನ ಹೊರ ಹಾಕಿರುವ ಸಿನಿಮಾ ಪ್ರದರ್ಶಕರ ಸಂಘದ ಅಧ್ಯಕ್ಷರು, ಈ ಸ್ಟೇಟ್ಮೆಂಟ್ ಹೇಗಿದೆ ಅಂದ್ರೆ ಚಿತ್ರಮಂದಿರದ ಮಾಲೀಕರಿಗೆ ಕನ್ನಡ ಅಭಿಮಾನ ಇಲ್ಲ ಅನ್ನೊ ತರಹ ಇದೆ. ಅವರಿಗೆ ಕನ್ನಡ ಬೆಳೆಸಬೇಕು ಅಂತಿದ್ರೆ ಎಲ್ಲಾ ಕಡೆ ಕನ್ನಡ ವರ್ಷನ್ ರಿಲೀಸ್ ಮಾಡ್ಲಿ. ತೆಲುಗು ರಿಲೀಸ್ ಮಾಡೋದು ಬೇಡವೇ ಬೇಡ ಎಂದಿದ್ದಾರೆ.