ರಸ್ತೆಯೋ, ನೀರಿನ ಹೊಂಡವೋ?

1003697975
Published on

*ಕೆರೆಯಾಗಿರುವ ಚನ್ನಪಟ್ಟಣದ ಎಂ.ಜಿ.ರಸ್ತೆ

* ನಿತ್ಯ ಪರದಾಡುತ್ತಿರುವ ಸಾರ್ವಜನಿಕರು

* ಜನತೆಗೆ ಸಾಂಕ್ರಾಮಿಕ ರೋಗದ ಭೀತಿ

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ನಗರದ ಪ್ರಮುಖ ರಸ್ತೆಯಾದ ಎಂ.ಜಿ.ರಸ್ತೆಯಲ್ಲಿ ನೀರು ನಿಲ್ಲುತ್ತಿರುವ ಕಾರಣ ಪಾದಚಾರಿಗಳು ಸೇರಿ ವಾಹನ ಸವಾರರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಚನ್ನಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಎಂಜಿ ರಸ್ತೆಯೂ ಒಂದು. ಪೇಟೆಬೀದಿ ಎಂತಲೂ ಕರೆಯುವ ಈ ರಸ್ತೆ ಪ್ರಮುಖ ವಾಣಿಜ್ಯ ವ್ಯವಹಾರಗಳ ಕೇಂದ್ರವಾಗಿದೆ. ಆದರೆ, ಈ ರಸ್ತೆಯ ನಿಂಬೆಹಣ್ಣು ಸರ್ಕಲï‌ನಿಂದ ಡ್ಯೂಂ ಲೈಟ್ ವೃತ್ತದವರೆಗೆ ಹಲವು ಕಡೆ ನೀರು ನಿಲ್ಲುತ್ತಿರುವ ಕಾರಣ ಸಂಚಾರಕ್ಕೆ ಸಾಕಷ್ಟು ಸಮಸ್ಯೆ ತಂದೊಡ್ಡಿದೆ. ಮಳೆ ಬಂದಾಗಂತೂ ಇದು ರಸ್ತೆಯೋ ಅಥವಾ ನೀರಿನ ಹೊಂಡವೋ ಎಂದು ಅನುಮಾನ ಮೂಡುವಂತಾಗುತ್ತದೆ.

ಹಲವು ವರ್ಷಗಳ ಇತಿಹಾಸ!

ನಗರದ ಹೃದಯ ಭಾಗದಲ್ಲಿ ಹಾದುಹೋಗುವ ಮಹಾತ್ಮಗಾಂಧಿ ರಸ್ತೆ (ಎಂಜಿ ರಸ್ತೆಗೆ) ನೂರಾರು ವರ್ಷಗಳ ಇತಿಹಾಸವಿದೆ. ಮಹಾತ್ಮಗಾಂಧಿಯವರು ಈ ರಸ್ತೆಯಲ್ಲಿ ಹಾದುಹೋಗಿದ್ದರು ಎಂಬ ಕಾರಣಕ್ಕೆ ಅವರ ಹೆಸರನ್ನೇ ಈ ರಸ್ತೆಗಿಡಲಾಗಿದೆ. ಮೈಸೂರು ಮಹಾರಾಜರ ಕಾಲದಲ್ಲಿ ಅಭಿವೃದ್ಧಿಪಡಿಸಲಾದ ಈ ರಸ್ತೆ ಈಗಲೂ ಉತ್ತಮ ಗುಣಮಟ್ಟದಿಂದ ಕೂಡಿದೆ. ಆದರೆ, ಇತ್ತೀಚೆಗೆ ಕೆಲವರ್ಷಗಳ ಹಿಂದೆ ನಡೆದ ರಸ್ತೆ ವಿಸ್ತರಣೆ ಹಾಗೂ ಚರಂಡಿ ಕಾಮಗಾರಿಯನ್ನು ಅವೈe್ಞÁನಿಕವಾಗಿ ಮಾಡಿರುವ ಹಿನ್ನೆಲೆಯಲ್ಲಿ ಸದ್ಯ ಅವ್ಯವಸ್ಥೆಯ ಆಗರವಾಗಿದೆ.

ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದ ಕಾರಣ ನೀರು ರಸ್ತೆಯಲ್ಲಿಯೇ ನಿಲುಗಡೆಯಾಗುತ್ತಿದೆ. ಚರಂಡಿಗಳು ಊಳು ತುಂಬಿಕೊAಡಿರುವುದು ಒಂದು ಕಾರಣವಾದರೆ, ಈ ರಸ್ತೆ ಕಾಮಗಾರಿಯಲ್ಲಿ ಈ ಹಿಂದೆ ನಡೆದಿರುವ ಅವ್ಯವಹಾರದ ಪ್ರತಿಸಲವೂ ಅವ್ಯವಸ್ಥೆಗೆ ಕಾರಣ ಎಂದರೆ ತಪ್ಪಾಗಲಾರದು. ರಸ್ತೆಯಲ್ಲಿ ಮಂಡಿಯೂದ್ದ ನೀರು ನಿಲ್ಲುವ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ಹಾಗೂ ವರ್ತಕರು ಪರಿಪಾಟಲು ಅನುಭವಿಸುವಂತಾಗಿದೆ.

ಮಳೆ ಬಂದಾಗ ದೇವರಿಗೆ ಪ್ರೀತಿ!

ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದ ಕಾರಣ ರಸ್ತೆಯ ತಗ್ಗಿನಲ್ಲಿ ಅಪಾರ ಪ್ರಮಾಣದ ನೀರು ನಿಲುಗಡೆಯಾಗುತ್ತಿದೆ. ರಸ್ತೆಯಲ್ಲಿರುವ ಡಂಕ್‌ಗಳನ್ನು ಅವೈಜ್ಞಾನಿಕವಾಗಿ ಮಾಡಿರುವುದು ಸೇರಿ ಚರಂಡಿ ಕಾಮಗಾರಿಯಲ್ಲಿನ ಲೋಪ ಇದಕ್ಕೆಲ್ಲ ಕಾರಣವಾಗಿದೆ. ಮಳೆನೀರು ನಿಂತು ರಸ್ತೆಯಲ್ಲಿರುವ ಗುಂಡಿಗಳು ಕಾಣದ ಹಿನ್ನೆಲೆಯಲ್ಲಿ ಹಲವಾರು ಮಂದಿ ದ್ವಿಚಕ್ರ ವಾಹನ ಸವಾರರು ಪೆಟ್ಟು ಮಾಡಿಕೊಂಡಿರುವ ನಿದರ್ಶನಗಳು ಇವೆ.

ಈ ರಸ್ತೆ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಹಿನ್ನೆಲೆಯಲ್ಲಿ ಪ್ರತಿನಿತ್ಯ ಸಾವಿರಾರು ಮಂದಿ ವ್ಯಾಪಾರ ವಹಿವಾಟಿಗೆ ಈ ರಸ್ತೆಗೆ ಆಗಮಿಸುತ್ತಾರೆ. ಆದರೆ, ರಸ್ತೆಯ ಅವ್ಯವಸ್ಥೆಯಿಂದ ಎಲ್ಲರಿಗೂ ಸಮಸ್ಯೆ ಉಂಟಾಗುತ್ತಿದೆ. ಸಂಬAಧಿಸಿದ ನಗರಸಭೆ ಈ ಬಗ್ಗೆ ಗಮನಹರಿಸಿ, ರಸ್ತೆಯಲ್ಲಿ ನೀರು ನಿಲ್ಲದ ರೀತಿಯಲ್ಲಿ ಕ್ರಮವಹಿಸಲಿ ಎಂಬುದೇ ಪತ್ರಿಕೆಯ ಕಾಳಜಿಯಾಗಿದೆ.

ಎಂಜಿ ರಸ್ತೆ ನಗರದ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ತಾಲೂಕಿನ ಜನತೆ ವಿವಿಧ  ವಸ್ತುಗಳ ಖರೀದಿಗೆ ಈ ರಸ್ತೆಗೆ ಆಗಮಿಸುತ್ತಾರೆ. ಆದರೆ, ರಸ್ತೆಯಲ್ಲಿ ಮಳೆ ನೀರು ನಿಲ್ಲುತ್ತಿರುವುದು ಸಾಕಷ್ಟು ಸಮಸ್ಯೆಯಾಗುತ್ತಿದೆ. ಇದರಿಂದ ವರ್ತಕರಿಗೂ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ನಗರಸಭೆ ಅಧ್ಯಕ್ಷ ಮತ್ತು ಪೌರಾಯುಕ್ತರು ಗಮನಹರಿಸಬೇಕು.| ಸಿ.ಜಿ.ರಮೇಶ್ ಕುಮಾರ್, ವರ್ತಕ=ಮಳೆಬಂದಾಗ ಈ ರಸ್ತೆಯ ಕೆಲವು ಕಡೆ ನೀರು ನಿಲುಗಡೆಯಾಗುತ್ತಿರುವುದು ನಮ್ಮ ಗಮನಕ್ಕೂ ಬಂದಿದೆ. ಇದಕ್ಕೆ ಪರಿಹರಿಸಲು ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿ ಸೂಚಿಸಿದ್ದೇನೆ. ಅಗತ್ಯ ಬಿದ್ದರೆ ಪರ್ಯಾಯ ಕಾಮಗಾರಿಯನ್ನು ಆರಂಭಿಸುತ್ತೇವೆ. ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗದಂತೆ ಕೂಡಲೇ ಕ್ರಮ ಕೈಗೊಳ್ಳುತ್ತೇವೆ.| | ಮಹೇಂದ್ರ, ಪೌರಾಯುಕ್ತ ಚನ್ನಪಟ್ಟಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net