ವೈದ್ಯಕೀಯ ರಂಗದಲ್ಲಿ ಕ್ರಾಂತಿಕಾರಿ ಬೆಳವಣಿಗೆ: ಪ್ರೊ.ಎಂ.ಶಾಂತಾರಾಮ ಶೆಟ್ಟಿ ಅಭಿಪ್ರಾಯ

Ull_NITTE
Published on

ಉಳ್ಳಾಲ: ರೋಬೋಟಿಕ್ ಸರ್ಜರಿ ವೈದ್ಯಕೀಯ ರಂಗದಲ್ಲಿ ಕ್ರಾಂತಿಕಾರಿ ಬೆಳವಣಿಗೆ ತಂದಿದೆ ಎಂದು ನಿಟ್ಟೆ ವಿ.ವಿ. ಶೈಕ್ಷಣಿಕ ಸಹಕುಲಾಧಿಪತಿ ಪ್ರೊ.ಎಂ.ಶಾಂತಾರಾಮ ಶೆಟ್ಟಿ ಹೇಳಿದರು. ನಿಟ್ಟೆ ಪರಿಗಣಿಸಲ್ಪಟ್ಟ ವಿವಿ ಅಂಗಸಂಸ್ಥೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಮಂಗಳವಾರ ಯೂರೋಲಾಜಿ, ಶಸ್ತ್ರಚಿಕಿತ್ಸಾ ವಿಭಾಗ, ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ, ಗ್ಯಾಸ್ಟ್ರೋ ಎಂಟರ್ಲಜಿ ಸಂಬಂಧಿತ ಐದು ವಿಭಾಗಕ್ಕೆ ಉಪಯೋಗವಾಗುವ ರೋಬೋಟಿಕ್ ಶಸ್ತ್ರಚಿಕಿತ್ಸಾ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಕ್ಯಾನ್ಸರ್, ಯೂರೋಲಾಜಿ, ಶಸ್ತ್ರಚಿಕಿತ್ಸೆ ಸಂದರ್ಭ ಅವಶ್ಯಕತೆಗೆ ಅನುಗುಣವಾಗಿ ಯಾವುದು ಸೂಕ್ತ ಎಂಬುದನ್ನು ಕ್ಷಣಾರ್ಧದಲ್ಲಿ ಅರಿಯಲು ಚಿಕಿತ್ಸೆಯಲ್ಲಿ ಹಲವು ವಿಭಾಗಗಳಿಗೆ ರೋಬೋಟಿಕ್ ತಂತ್ರಜ್ಞಾನ ನೆರವಾಗಲಿದೆ ಎಂದರು. ಯೂರೋಲಾಜಿ ಪ್ರೊಫೆಸರ್ ಹಾಗೂ ಮುಖ್ಯಸ್ಥ ಡಾ.ರಾಜೀವ್ ಟಿ.ಪಿ.ಮಾತನಾಡಿ, ನೂತನ ತಂತ್ರಜ್ಞಾನ ಅಳವಡಿ ಸಂಸ್ಥೆಯ ಪಾಲಿಗೊಂದು ಮೈಲಿಗಲ್ಲು. ಒಂದು ತಿಂಗಳ ಹಿಂದೆ ಅಳವಡಿಸಲಾಗಿದ್ದು ಈಗಾಗಲೇ ಇಪ್ಪತ್ತು ಕಠಿಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದರು. ನಿಟ್ಟೆ ವಿವಿ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ನೂತನ ಸೌಲಭ್ಯ ಉದ್ಘಾಟಿಸಿ, ಕ್ಷೇಮ ತಜ್ಞರ ಕಾರ್ಯವೈಖರಿ ಶ್ಲಾಘಿಸಿದರು. ಕುಲಪತಿ ಪ್ರೊ.ಎಂ.ಎಸ್.ಮೂಡಿತ್ತಾಯ, ಕುಲಸಚಿವ ಡಾ.ಹರ್ಷ ಹಾಲಹಳ್ಳಿ, ವೈದ್ಯಕೀಯ ಅಧೀಕ್ಷಕಿ ಡಾ.ಸುಮಲತಾ ಆರ್.ಶೆಟ್ಟಿ, ಶಸ್ತ್ರಚಿಕಿತ್ಸಾ ವಿಭಾಗ ಮುಖ್ಯಸ್ಥ ಡಾ.ಭಗವಾನ್, ಆಂಕೋಲಾಜಿ ಸರ್ಜನ್ ಡಾ.ವಿನಯ ಕುಮಾರ್ ರಾಜೇಂದ್ರ, ಸರ್ಜಿಕಲ್ ಗ್ಯಾಸ್ಟ್ರೋ ತಜ್ಞ ಡಾ.ಸಂತೋಷ್ ಕುಮಾರ್, ಒಬಿಜಿ ವಿಭಾಗ ಮುಖ್ಯಸ್ಥೆ ಡಾ.ಲಕ್ಷ್ಮೀ ಮಂಜೀರಾ, ಯೂರೋಲಾಜಿ ವಿಭಾಗದ ಡಾ.ಸೂರಜ್ ಹೆಗ್ಡೆ ಹಾಗೂ ಡಾ.ನರೇಂದ್ರ ಪೈ ಉಪಸ್ಥಿತರಿದ್ದರು.

ದಾವಿಂಚಿ ಎಂಬ ತಂತ್ರಜ್ಞಾನವುಳ್ಳ ಜಗತ್ತಿನ ಅತ್ಯಂತ ಮುಂದುವರಿದ ರೋಬೋಟಿಕ್ ಶಸ್ತ್ರಚಿಕಿತ್ಸಾ ವಿಧಾನದ ವ್ಯವಸ್ಥೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಅಳವಡಿಸಲಾಗಿದ್ದು, ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದ ರೋಗಿಗಳ ಪಾಲಿಗೆ ಬಹುದೊಡ್ಡ ವರದಾನ. - ಡಾ.ಶ್ರೀಪಾದ್, ಮುಖ್ಯಸ್ಥ, ಅನಸ್ತೇಶಿಯಾ ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net