ರಾಯಲ್​ ಎನ್​ಫೀಲ್ಡ್​ ಬೈಕ್​ ಬುಕಿಂಗ್​ ಮಾಡಿದ್ದ ವ್ಯಕ್ತಿಗೆ ಬಡ್ಡಿ ಸಮೇತ ಹಣ ಹಿಂತಿರುಗಿಸಿ! ಗ್ರಾಹಕರ ಆಯೋಗ ಸೂಚನೆ

Royal ENField Bike
Published on

ಬಾಗಲಕೋಟೆ: ರಾಯಲ್​ ಎನ್​ಫೀಲ್ಡ್​ ಬೈಕ್​ ಖರೀದಿಲು ವ್ಯಕ್ತಿಯೊಬ್ಬರು 25 ಸಾವಿರ ಹಣ ಕೊಟ್ಟು ಬುಕಿಂಗ್​ ಮಾಡಿದ್ದರು. 40 ದಿನದಲ್ಲಿ ಬೈಕ್​ ನೀಡೋದಾಗಿ ಶೋರೂಂನವರೂ ಹೇಳಿದ್ದರು. ಇನ್ನೇನು ರಾಯಲ್​ ಎನ್​ಫೀಲ್ಡ್​ ಬೈಕ್​ ಮನೆಗೆ ಬರುತ್ತೆ, ಊರೆಲ್ಲಾ ಸುತ್ತಾಡಬೇಕು ಎಂದು ಮಹದಾಸೆ ಹೊಂದಿದ್ದ ವ್ಯಕ್ತಿಗೆ ನಿರಾಸೆ ಉಂಟು ಮಾಡಿದ ಮಾಡಿದ ತಪ್ಪಿಗೆ ಬಡ್ಡಿ ಸಮೇತ ಹಣ ವಾಪಸ್​ ಮಾಡೇಕಾದ ಸ್ಥಿತಿ ಬಾಗಲಕೋಟೆ ಮೋಟರ್ಸ್​ ಶೋರೂಂನವರಿಗೆ ಬಂದಿದೆ.

ವಿಠ್ಠಲ ಕಣ್ಣಿನ ಆಸ್ಪತ್ರೆಯ ಸಂಗನಗೌಡ ಲೆಂಕೆನಗೌಡ ಪಾಟೀಲ ಎಂಬುವರು 2020ರ ಆಗಸ್ಟ್​ 3ರಂದು ರಾಯಲ್​ ಎನ್​ಫೀಲ್ಡ್​ ಬೈಕ್​ ಖರೀದಿಗೆ ಬಾಗಲಕೋಟೆ ಮೋಟರ್ಸ್​​ ಇವರಲ್ಲಿ 25 ಸಾವಿರ ರೂ. ಕೊಟ್ಟು ಬುಕ್​ ಮಾಡಿದ್ದರು. 40 ದಿನಗಳಲ್ಲಿ ಬೈಕ್​ ನೀಡುವುದಾಗಿ ಬಾಗಲಕೋಟೆ ಮೋಟರ್ಸ್​​ನವರು ತಿಳಿಸಿದ್ದರು. ಆದರೆ, ಸಾಕಷ್ಟು ಸಲ ಕೇಳಿದರೂ ಡೆಲಿವರಿ ಮಾಡದೆ ಇದ್ದಾಗ ದೂರುದಾರರು ತಮ್ಮ ಹಣವನ್ನಾದರೂ ಮರಳಿಸಲು ಕೇಳಿದ್ದಾರೆ. ಅದಕ್ಕೂ ಅವರು ಸ್ಪಂದಿಸಲಿಲ್ಲ.

ಬೇಸತ್ತ ಸಂಗನಗೌಡ ಅವರು ದಿ.ಪ್ರೊಪೆಟರ್​ ಬಾಗಲಕೋಟೆ ಮೋಟರ್ಸ್​ ವಿರುದ್ಧ 2021ರ ಫೆ. 9ರಂದು ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು. ಎಲ್ಲ ದಾಖಲೆ ಹಾಗೂ ಸಾಕ್ಷ್ಯ ಪರಿಶೀಲಿಸಿದ ಆಯೋಗ ಮಹತ್ವದ ಆದೇಶ ನೀಡಿದೆ. 25 ಸಾವಿರ ರೂ. ಪಾವತಿಸಿದ ದಿನದಿಂದ ಶೇ.6 ಬಡ್ಡಿ ಸೇರಿಸಿ 30 ದಿನಗಳಲ್ಲಿ ಪೂರ ಹಣ ಕೊಡಬೇಕು. ಅವರಿಗಾದ ಮಾನಸಿಕ ವ್ಯಥೆಗಾಗಿ 2000 ರೂ. ಹಾಗೂ ದಾವಾ ವೆಚ್ಚ 1000 ರೂ. ಕೊಡಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ವಿಜಯಕುಮಾರ ಪಾವಲೆ, ಸದಸ್ಯರಾದ ಸಿ.ಎಚ್​. ಸಮಿವುನ್ನೀಸಾ ಅಬ್ರಾರ, ರಂಗನಗೌಡ ದಂಡಣ್ಣವರ ಅವರಿದ್ದ ನ್ಯಾಯಪೀಠ ಆದೇಶ ಹೊರಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net