ನಿವೃತ್ತ ಸೈನಿಕನ ಕೃಷಿ ಪ್ರೀತಿ

ನಿವೃತ್ತ ಸೈನಿಕನ ಕೃಷಿ ಪ್ರೀತಿ
Published on

ಹಿರಿಕರ ರವಿ ಸೋಮವಾರಪೇಟೆ

ಕೃಷಿಕ ಮತ್ತು ಸೈನಿಕ ದೇಶದ ಅಭಿವೃದ್ಧಿಯಲ್ಲಿ ತನ್ನದೆಯಾದ ಕೊಡುಗೆ ನೀಡುತ್ತಿದ್ದಾರೆ. ಕೃಷಿ ಭೂಮಿಯಿಂದಲೇ ನೇರವಾಗಿ ಸೈನ್ಯಕ್ಕೆ ತೆರಳಿ, ದೇಶಸೇವೆಯ ನಂತರ ಅದೇ ಭೂಮಿಯಲ್ಲಿ ಕೃಷಿ ಮಾಡಿ ಜೀವನ ಕಟ್ಟಿಕೊಂಡಿದ್ದಾರೆ ಮಾಜಿ ಸೈನಿಕ ಸಿದ್ದಲಿಂಗಪುರ ಗ್ರಾಮದ ಎಂ.ವಿ.ಸ್ಟ್ಯಾನಿ.

ತನ್ನ ಹದಿನೇಳನೆ ವಯಸ್ಸಿನಲ್ಲಿ ಕೃಷಿ ಭೂಮಿಯಲ್ಲಿ ತಂದೆಯೊಂದಿಗೆ ಕೆಲಸ ಮಾಡುವಾಗಲೇ ಸೈನ್ಯಕ್ಕೆ ಆಯ್ಕೆಯಾಗಿರುವ ಬಗ್ಗೆ ಶುಭ ಸಂದೇಶ ಬರುತ್ತದೆ. 20 ವರ್ಷ ಸೈನ್ಯದ ಕಠಿಣ ವಿಭಾಗದಲ್ಲಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿಯ ನಂತರ ಪ್ರಗತಿಪರ ಕೃಷಿಕರಾಗಿದ್ದಾರೆ.

ವರ್ಗಿಸ್ ಮತ್ತು ಮೇರಿ ದಂಪತಿಯ ಪುತ್ರ ಸ್ಟಾೃನಿ ವಿದ್ಯಾಭ್ಯಾಸದ ದಿನಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದರು. ಆಗ ಸಿದ್ದಲಿಂಗಪುರ ಗ್ರಾಮದಲ್ಲಿ ಮಣ್ಣು ಬರಡಾಗಿತ್ತು. ಕೃಷಿಗೆ ಪೂರಕವಾಗಿರಲ್ಲಿಲ್ಲ. ಮಳೆಯ ನೀರನ್ನೇ ಆಶ್ರಯಿಸಿ ಕೃಷಿ ಮಾಡಬೇಕಿತ್ತು. ಸರಿಯಾದ ಸಮಯಕ್ಕೆ ಮಳೆ ಬೀಳುತ್ತಿರಲಿಲ್ಲ. ಗೆಣಸು, ಜೋಳ, ರಾಗಿ, ಕಾಳು ಇಂತಹ ಕೆಲ ಬೆಳೆಗಳನ್ನು ಮಾತ್ರ ಬೆಳೆಯಬಹುದಿತ್ತು. ಈ ಸಂದರ್ಭದಲ್ಲೇ ಬದುಕು ಕಟ್ಟಿಕೊಳ್ಳಲು ಸ್ಟಾೃನಿ ಸೈನ್ಯಕ್ಕೆ ಸೇರಿದರು.

1989ರಲ್ಲಿ ಸೈನ್ಯಕ್ಕೆ ಸೇರ್ಪಡೆಯ ನಂತರ ಸಿಕ್ಕಿದ ಸಂಬಳದಲ್ಲಿ ಒಂದಷ್ಟು ಹಣವನ್ನು ತಂದೆಗೆ ಕಳುಹಿಸಿ, ಕೃಷಿ ಭೂಮಿಯನ್ನು ಮಾರಾಟ ಮಾಡದಂತೆ ಎಚ್ಚರ ವಹಿಸಿದರು. ಭಾರತ ಭೂಸೇನೆಯ ಸಿಗ್ನಲ್ ಕೋರನಲ್ಲಿ ಕರ್ತವ್ಯ ನಿರ್ವಹಿಸಿದರು. 1999ರ ಮೇನಲ್ಲಿ ಕಾರ್ಗಿಲ್ ಯುದ್ಧ ಪ್ರಾರಂಭವಾಯಿತು. ಸಿಗ್ನಲ್‌ನ ವಿಶೇಷ ಅಧಿಕಾರಿಯಾಗಿ 1999ರ ಮೇಯಿಂದ 2001 ಆಗಷ್ಟ್ ವರೆಗೆ ನಡೆದ ಯುದ್ದದಲ್ಲಿ ಗೆಲವು ಪಡೆಯುವ ತನಕ ಕಠಿಣ ಸಂದರ್ಭದಲ್ಲಿ ಕೆಲಸ ನಿರ್ವಹಿಸಿದರು. ಈ ಸಂದರ್ಭದಲ್ಲಾದ ಅಪಘಾತದಿಂದ ಸೊಂಟಕ್ಕೆ ಪೆಟ್ಟಾಯಿತು.

ನಂತರ 2008ರ ತನಕ ಪಾಕಿಸ್ತಾನ ಗಡಿಭಾಗ, ಜಮ್ಮು-ಕಾಶ್ಮಿರ, ಮತ್ತು ಪಂಜಾಬ್‌ನಲ್ಲಿ ಕರ್ತವ್ಯ ನಿರ್ವಹಿಸಿದರು. ಅತಿಯಾದ ಚಳಿಯಿಂದ ಕೆಲಸ ನಿರ್ವಹಿಸಲು ಅಸಾಧ್ಯವಾದ ಕಾರಣ ಸ್ವಯಂ ನಿವೃತ್ತ ಪಡೆದು ಸ್ವಗ್ರಾಮಕ್ಕೆ ಮರಳಿದರು.

ಬಂದವರೇ ನೇರವಾಗಿ ಕೃಷಿ ಕ್ಷೇತ್ರಕ್ಕೆ ಮರಳಿದ ಮಾಜಿ ಸೈನಿಕ ಸ್ಟಾೃನಿ 17ವರ್ಷದಿಂದ ಕೃಷಿಯಲ್ಲೇ ಸೆಣಸುತ್ತಿದ್ದಾರೆ. ಲಾಭ-ನಷ್ಟದಲ್ಲೇ ಪ್ರಗತಿಪರ ಕೃಷಿರಾಗಿದ್ದಾರೆ. ಮಣ್ಣಿಗೆ ಹಾಕಿದ ಹಣ ಮರಳಿ ಸಿಕ್ಕೆಸಿಗುತ್ತೆ ಎಂಬ ದೃಢತೆಯಿಂದ ಕೆಲಸ ಮಾಡುತ್ತಿದ್ದಾರೆ.

ಪತ್ನಿ ಪ್ರೋರಾ ಕೃಷಿಗೆ ಕೈಜೋಡಿಸಿದ್ದಾರೆ. ಮನೆಯ ಸುತ್ತಮುತ್ತ ನರ್ಸರಿ ಮಾಡುತ್ತಾರೆ. ಪುತ್ರರಾದ ಹ್ಯಾರೆನ್ ಮತ್ತು ಎವಿನ್ ಬಿಕಾಂ ಪದವಿಧರರಾಗಿದ್ದು, ತಂದೆಯೊಂದಿಗೆ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗಳು ಅಬಿಲ್ ಅಮ್ಮನೊಂದಿಗೆ ನರ್ಸರಿಯಲ್ಲಿ ಪಳಗಿದ್ದಾಳೆ.

6 ಎಕರೆ ಕಾಫಿ ತೋಟದಲ್ಲಿ ಕಾಳುಮೆಣಸು ಕೃಷಿ ಮಾಡಿದ್ದಾರೆ. ಒಂದು ವರ್ಷ ಮೂರು ಟನ್ ಕಾಳುಮೆಣಸು ಫಸಲು ತೆಗೆದಿದ್ದಾರೆ. 13 ಲಕ್ಷ ರೂ.ನಷ್ಟು ಅದಾಯಗಳಿಸಿದ್ದಾರೆ. ಪ್ರತಿ ವರ್ಷ ಮನೆಯ ಹತ್ತಿರ ಕಾಳುಮೆಣಸು ಬಳ್ಳಿ ನರ್ಸರಿ ಮಾಡುತ್ತಾರೆ. 15 ಸಾವಿರ ಬಳ್ಳಿಯನ್ನು ಬೆಳೆಯುತ್ತಾರೆ. ಮೂರು ಕಡ್ಡಿಗಳಿರುವ ಒಂದು ಬುಟ್ಟಿ 60 ರೂ.ಗಳಿಗೆ ಮಾರಾಟ ಮಾಡುತ್ತಾರೆ. ಪನ್ನೀರ್ 1,2,3, ಕರಿಮುಂಡ ತಳಿಗಳನ್ನು ಬೆಳೆಯುತ್ತಾರೆ.

ಉತ್ತರ ಕರ್ನಾಟಕ ಹಾಗೂ ಬಿಸಿಲು ಹೆಚ್ಚಿರುವ ಬಯಲುಸೀಮೆಯಲ್ಲಿ ಬೆಳೆಯುತ್ತಿದ್ದ ಕಲ್ಲಂಗಡಿಯನ್ನು ಸೋಮವಾರಪೇಟೆ ತಾಲೂಕಿಗೆ ಪರಿಚಯಿಸಿದ ಕೀರ್ತಿ ಸ್ಟಾೃನಿ ಅವರಿಗೆ ಸಲ್ಲುತ್ತದೆ. ಪ್ರಸಕ್ತ ವರ್ಷ 15 ಎಕರೆ ಭೂಮಿಯಲ್ಲಿ ಕಲ್ಲಂಗಡಿ ಬೆಳೆದಿದ್ದಾರೆ. ವೈಜ್ಞಾನಿಕ ಕೃಷಿ ಪದ್ಧ್ದತಿಯಲ್ಲಿ ಬೆಳೆಯುವ ಹಣ್ಣು 60 ದಿನಕ್ಕೆ ಕಟಾವಿಗೆ ಬರುತ್ತದೆ. ಎಕರೆಗೆ 30 ರಿಂದ 35 ಟನ್ ಕಲ್ಲಂಗಡಿ ಬೆಳೆದ ಸಾಧನೆ ಇವರದು. ಪ್ರಸಕ್ತ ವರ್ಷ ಬೆಲೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕೆ.ಜಿ.ಒಂದಕ್ಕೆ 9 ರೂ.ಗಳಿಗೆ ಮಾರಾಟ ಮಾಡಿದ್ದಾರೆ.

ಹಣ್ಣಿಗೆ ಸಿರೆಂಜ್ ಮೂಲಕ ಬಣ್ಣವನ್ನು ಇಂಜೆಕ್ಟ್ ಮಾಡುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ಬೇಡಿಕೆ ಕುಸಿದಿದೆ. ಮೊನ್ನೆ ಸುರಿದ ಆಲಿಕಲ್ಲು ಮಳೆಯಿಂದ ಒಂದಷ್ಟು ಫಸಲು ನಷ್ಟವಾಗಿದೆ ಎಂದು ಮಾಜಿ ಸೈನಿಕ ಹೇಳಿದರು.

ಶುಂಠಿ ಕೃಷಿಯಲ್ಲೂ ಮಾಜಿ ಸೈನಿಕ ಎತ್ತಿದ ಕೈ. ಪ್ರಸಕ್ತ 6 ಎಕರೆ ಶುಂಠಿ ಕೃಷಿ ಮಾಡಿದ್ದಾರೆ. ನಾಲ್ಕು ಎಕರೆಯಲ್ಲಿ ಟೊಮೆಟೋ ಬೆಳೆದ್ದಿದ್ದಾರೆ. 26 ಕೆ.ಜಿ.ಯ ಕ್ರೇಟ್‌ಗೆ 600 ರೂ.ಗಳಿಗೆ ಮಾರಾಟ ಮಾಡಿದ್ದಾರೆ. ಸಿಹಿ ಗೆಣಸು, ಬಳ್ಳಿ ಗೆಣಸು, ಕೆಸ, ಸುವರ್ಣಗಡ್ಡೆ ಇನ್ನಿತರ ಬೆಳೆಗಳನ್ನು ಬೆಳೆದಿದ್ದಾರೆ. ಕೊಡಗಿನಲ್ಲಿ ನಡೆಯುವ ಕೃಷಿ ಸಂಬಂಧಿತ ಕಾರ್ಯಾಗಾರಗಳಲ್ಲಿ ಪ್ರಗತಿಪರ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಿಶ್ರ ಕೃಷಿಯ ಬಗ್ಗೆ ರೈತರಿಗೆ ತಿಳಿಸಿಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net