

ನಾಪೋಕ್ಲು: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಸಮಾಜ ವಿಜ್ಞಾನದ ಪ್ರಶ್ನೆ ಪತ್ರಿಕೆಯ ವಿನ್ಯಾಸದಲ್ಲಿ ಬದಲಾವಣೆ ಮಾಡುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ರಂಗಧಾಮಪ್ಪ ಅವರಿಗೆ ಜಿಲ್ಲಾ ವಿಜ್ಞಾನ ಪರಿಷತ್ ವತಿಯಿಂದ ಬುಧವಾರ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಸಂಚಾಲಕ ಪರಮೇಶ್ ಮಾತನಾಡಿ, ಕಲಿಕೆಯಲ್ಲಿ ಸರಾಸರಿ ಮಟ್ಟಕ್ಕಿಂತಲೂ ಕೆಳಗಿರುವ ವಿದ್ಯಾರ್ಥಿಗಳು ಸುಲಭವಾಗಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ವಿದ್ಯಾರ್ಥಿ ಸ್ನೇಹಿತ ಪತ್ರಿಕೆ ರೂಪಿಸುವಂತೆ ಮನವಿ ಮಾಡಿದರು.
10ನೇ ತರಗತಿ ವಿದ್ಯಾರ್ಥಿಗಳಿಗೆ ಅಖಿಲ ಪ್ರಶ್ನೆ ಪತ್ರಿಕೆಯನ್ನು ರೂಪಿಸಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಸಮಾಜ ವಿಜ್ಞಾನ, ವಿಜ್ಞಾನ, ಗಣಿತ ವಿಷಯಗಳಲ್ಲಿ ಕಷ್ಟಕರ ಪ್ರಶ್ನೆಗಳನ್ನು ನೀಡಲಾಗುತ್ತಿದೆ. ಇದರಿಂದ ಕೆಲವರು ಅನುತ್ತೀರ್ಣರಾಗುತ್ತಿದ್ದಾರೆ ಎಂದು ಹೇಳಿದರು.
ಸೋಮವಾರಪೇಟೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ಸಮಾಜ ವಿಜ್ಞಾನದ ಜಿಲ್ಲಾ ಸಂಚಾಲಕ ಎಸ್.ಪಿ.ಪರಮೇಶ್, ಕೊಡಗು ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಎಚ್.ಜಿ. ಕುಮಾರ್, ಸಮಾಜ ವಿಜ್ಞಾನ ಪರಿಷತ್‌ನ ಸುರೇಶ್, ಹ್ಯೂಬರ್ಟ್ ಇದ್ದರು.