ಶ್ರದ್ಧಾಕೇಂದ್ರಗಳ ಕೊಡುಗೆಯಿಂದ ರಾಮರಾಜ್ಯ ಸ್ಥಾಪನೆ-ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

marodi
ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯನ್ನು ಕನ್ಯಾಡಿ ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು.
Published on

ಬೆಳ್ತಂಗಡಿ: ಪರಸ್ಪರ ಭ್ರಾತೃತ್ವ, ಸೌಹಾರ್ದ, ವಿಶ್ವಾಸ, ನಂಬಿಕೆ ಮತ್ತು ಮೌಲ್ಯಯುತ ಜೀವನ ನಮ್ಮದಾದರೆ ರಾಮರಾಜ್ಯ ನಿರ್ಮಾಣ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶ್ರದ್ಧಾಕೇಂದ್ರಗಳ ಕೊಡುಗೆ ಅಪಾರವಾದುದು ಎಂದು ಕನ್ಯಾಡಿ ನಿತ್ಯಾನಂದನಗರ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಆಲಡೆ ಕ್ಷೇತ್ರ ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಭಾನುವಾರ ಆರಂಭಗೊಂಡಿದ್ದು, ಮೊದಲ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಮರೋಡಿ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, 850 ವಷರ್ಗಳ ಇತಿಹಾಸವಿರುವ ಈ ಕ್ಷೇತ್ರ ಹಲವು ವಷರ್ಗಳ ಹಿಂದೆ ಪಾಳುಬಿದ್ದಿತ್ತು. ಆಲಡೆ ಸಂಬಂಧವನ್ನು ಹೊಂದಿರುವ ಕ್ಷೇತ್ರವನ್ನು 12 ವಷರ್ಗಳ ಹಿಂದೆ ಊರ ಪರವೂರ ಭಕ್ತರ ಸಹಕಾರದಿಂದ ಜೀರ್ಣೋದ್ಧಾರ ಮಾಡಿ, ಬ್ರಹ್ಮಕಲಶೋತ್ಸವ ನೆರವೇರಿಸಲಾಗಿತ್ತು. ನಂತರದಲ್ಲಿ ಹತ್ತುಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿತ್ತು. ಸದ್ಯ ದೈವಸಂಕಲ್ಪದಂತೆ ಮತ್ತೆ ಬ್ರಹ್ಮಕಲಶೋತ್ಸವ ನಡೆಯುತ್ತಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ ಮಾತನಾಡಿ, ಬೆಳ್ತಂಗಡಿ ತಾಲ್ಲೂಕಿನಲ್ಲಿರುವ ಎರಡು ಆಲಡೆ ಕ್ಷೇತ್ರಗಳಲ್ಲಿ ಮರೋಡಿಯೂ ಒಂದಾಗಿದೆ ಎಂದರು.

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶಿವಪ್ರಸಾದ್ ಅಜಿಲ, ಹಿರ್ಗಾನ ವರ್ಧಮಾನ ಇಂಡಸ್ಟ್ರೀಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಪ್ರವೀಣ್ ಹೆಗ್ಡೆ, ಹೊಸ್ಮಾರು ವಿಜಯ ಕ್ಲಿನಿಕ್‌ನ ಡಾ.ಪ್ರಸಾದ್, ಶಿರ್ತಾಡಿ ಪ್ರಭಾ ಕ್ಲಿನಿಕ್‌ನ ಡಾ.ಆಶೀರ್ವಾದ್, ಮರೋಡಿ ಗ್ರಾಪಂ ಅಧ್ಯಕ್ಷ ರತ್ನಾಕರ ಬುಣ್ಣಾನ್, ಬೆಳ್ತಂಗಡಿಯ ವಕೀಲ ಅನಿಲ್ ಕುಮಾರ್ ಯು.ಶುಭಹಾರೈಸಿದರು.

ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಜಯಂತ ಕೋಟ್ಯಾನ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶೋಧರ ಬಂಗೇರ ನಿರೂಪಿಸಿದರು. ರತ್ನಾಕರ ಬುಣ್ಣಾನ್ ವಂದಿಸಿದರು.

ಸಮಾಜದಲ್ಲಿ ಉದಾತ್ತವಾದ ಸಂಬಂಧಗಳನ್ನು ಬೆಳೆಸುವ ನಿಟ್ಟಿನಲ್ಲಿ ದೈವಸ್ಥಾನ ಮತ್ತು ದೇವಸ್ಥಾನಗಳ ಪಾತ್ರ ದೊಡ್ಡದಿದೆ. ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಿಂದ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ಸಾಧ್ಯವಾಗುತ್ತದೆ. ಗ್ರಾಮದ ದೇವಸ್ಥಾನದ ಬ್ರಹ್ಮಕಲಶದಿಂದ ಊರಿಗೆ ಸುಭಿಕ್ಷೆಯಾಗುತ್ತದೆ.- ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಕನ್ಯಾಡಿ ನಿತ್ಯಾನಂದನಗರ ಶ್ರೀರಾಮ ಕ್ಷೇತ್ರದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net