More

    ದ.ಕ. ಕ್ಷೇತ್ರ ವಶಕ್ಕೆ ಪಡೆಯಲು ಕ್ಯಾಪ್ಟನ್-ಲಾಯರ್ ಫೈಟ್

    ಪಿ.ಬಿ.ಹರೀಶ್ ರೈ ಮಂಗಳೂರು
    ಬಿರುಬಿಸಿಲಿನ ಜತೆಗೆ ಲೋಕಸಭಾ ಚುನಾವಣೆಯಿಂದಾಗಿ ಕಡಲ ತಡಿಯ ದಕ್ಷಿಣ ಕನ್ನಡ ಜಿಲ್ಲೆ ಕಾವೇರಿದೆ. ಕ್ಷೇತ್ರದಲ್ಲಿ ಇಬ್ಬರು ಹೊಸಮುಖಗಳ ಹೋರಾಟಕ್ಕೆ ಅಖಾಡವೂ ಸಿದ್ಧವಾಗಿದೆ. ಮಾಜಿ ಯೋಧ, ಸಂಘ ಪರಿವಾರದ ಗರಡಿಯಲ್ಲಿ ಪಳಗಿದ ಕ್ಯಾ.ಬ್ರಿಜೇಶ್ ಚೌಟ ಬಿಜೆಪಿಯಿಂದ, ಜನಾರ್ದನ ಪೂಜಾರಿ ಪಟ್ಟಶಿಷ್ಯ, ಯುವ ವಕೀಲ ಪದ್ಮರಾಜ್ ಆರ್. ಕಾಂಗ್ರೆಸ್​ನಿಂದ ಕಣಕ್ಕಿಳಿದಿದ್ದಾರೆ. ಇಬ್ಬರೂ ಯುವಕರು, ವಿದ್ಯಾವಂತರು, ಸಜ್ಜನರು. ಇದುವರೆಗೆ ಯಾವುದೇ ಚುನಾವಣೆಗೆ ಸ್ಪರ್ಧಿಸದೆ ನೇರ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ಪಡೆದಿದ್ದು, ನಿಕಟ ಸ್ಪರ್ಧೆ ನಿರೀಕ್ಷಿಸಲಾಗಿದೆ. ಕ್ಷೇತ್ರ ಮರುವಿಂಗಡಣೆಗೆ ಮೊದಲು ದ.ಕ. ಕ್ಷೇತ್ರ ಮಂಗಳೂರು ಕ್ಷೇತ್ರವಾಗಿತ್ತು. ಕೊಡಗು ಜಿಲ್ಲೆ ಈ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. ಮೊದಲ ಒಂಬತ್ತು ಚುನಾವಣೆಯಲ್ಲಿ ಕಾಂಗ್ರೆಸ್​ನದ್ದೇ ಪ್ರಾಬಲ್ಯ. ಈ ಪೈಕಿ ಜನಾರ್ದನ ಪೂಜಾರಿ ನಿರಂತರ ನಾಲ್ಕು ಗೆಲುವು ದಾಖಲಿಸಿದ್ದರು. 90ರ ದಶಕದಲ್ಲಿ ಅಯೋಧ್ಯೆಯ ಹೋರಾಟ ಆರಂಭವಾದದ್ದೇ ತಡ ಕರಾವಳಿಯಲ್ಲಿ ಕಾಂಗ್ರೆಸ್ ಪತನ ಶುರುವಾಯಿತು. 1991ರಿಂದ ಸತತವಾಗಿ ಬಿಜೆಪಿಗೆ ಗೆಲುವು. ವಿ.ಧನಂಜಯ ಕುಮಾರ್ ನಾಲ್ಕು ಬಾರಿ, ನಳಿನ್ ಕುಮಾರ್ ಕಟೀಲ್ ಮೂರು ಬಾರಿ ಹಾಗೂ ಡಿ.ವಿ.ಸದಾನಂದ ಗೌಡ ಒಂದು ಬಾರಿ ಗೆಲುವು ದಾಖಲಿಸಿದ್ದರು.

    ಜಾತಿ ಲೆಕ್ಕಾಚಾರ: ಕ್ಷೇತ್ರದಲ್ಲಿ 17,96,826 ಮತದಾರರಿದ್ದಾರೆ. ಈ ಪೈಕಿ ಮುಸ್ಲಿಂ ಹಾಗೂ ಕ್ರೖೆಸ್ತ ಮತದಾರರು 4.5 ಲಕ್ಷ ಎಂದು ಅಂದಾಜಿಸಲಾಗಿದೆ. ಹಿಂದು ಮತದಾರರ ಪೈಕಿ ಬಿಲ್ಲವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

    plus minus

    ಆತ್ಮವಿಶ್ವಾಸದಲ್ಲಿ ಪಕ್ಷಗಳು: ಸತತ ಎಂಟು ಬಾರಿ ಗೆಲುವು ಸಾಧಿಸಿದ್ದೇವೆ. ಜನಾರ್ದನ ಪೂಜಾರಿ ಅವರನ್ನೇ ಐದು ಬಾರಿ ಸೋಲಿಸಿದ್ದೇವೆ. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಆರು ಕ್ಷೇತ್ರಗಳಲ್ಲಿ ಗೆಲುವಾಗಿದೆ. ಮೋದಿ ಅಲೆ ಇನ್ನಷ್ಟು ಪ್ರಬಲವಾಗಿದೆ. ಅಭ್ಯರ್ಥಿ ಬದಲಾವಣೆಯಿಂದ ಪಕ್ಷದೊಳಗಿನ ಅಸಮಾಧಾನವೂ ಶಮನವಾಗಿದೆ. ಅರುಣ್ ಪುತ್ತಿಲ ಪಕ್ಷಕ್ಕೆ ಮರಳಿ ಬಲ ತುಂಬಿದ್ದಾರೆ. ಹಿಂದುತ್ವದ ಬಲವಿದೆ. ಸೋಲುವ ಪ್ರಶ್ನೆಯೇ ಇಲ್ಲ ಎನ್ನುವ ಆತ್ಮವಿಶ್ವಾಸ ಬಿಜೆಪಿ ಪಾಳಯದಲ್ಲಿದೆ. ಹಿಂದಿನ ಚುನಾವಣೆಗಳಲ್ಲಿ ಬೇರೆ ಬೇರೆ ಕಾರಣಗಳಿಂದ ಸೋಲು ಕಂಡಿರಬಹುದು. ಆದರೆ ಈಗ ಕರಾವಳಿಯ ಚಿತ್ರಣ ಬದಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಆರು ಕ್ಷೇತ್ರ ಗೆದ್ದರೂ ಜಿಲ್ಲೆ ಯಲ್ಲಿ ಗೆಲುವಿನ ಅಂತರ ಕಡಿಮೆಯಾಗಿದೆ. ಸರ್ಕಾರದ ಗ್ಯಾರಂಟಿ ಬಲವಿದೆ. ಅಲ್ಪಸಂಖ್ಯಾತ ಜತೆ ಹೆಚ್ಚಿನ ಬಿಲ್ಲವ ಮತದಾರರು ಕೈ ಹಿಡಿಯಲಿದ್ದಾರೆ ಎನ್ನುವ ದೃಢವಿಶ್ವಾಸ ಕಾಂಗ್ರೆಸ್ ಪಕ್ಷದ್ದು.

    ಮತ ಸೆಳೆಯಲು ಕಸರತ್ತು: ಕರಾವಳಿ ಸೂಕ್ಷ್ಮಪ್ರದೇಶ. ಇಲ್ಲಿ ಹಿಂದುತ್ವ ಮತ್ತು ಅಲ್ಪಸಂಖ್ಯಾತರ ರಕ್ಷಣೆಯೇ ಪ್ರತಿಬಾರಿ ಚುನಾವಣೆ ವಿಷಯ. ಆದರೆ ಈ ಬಾರಿ ಧರ್ಮದ ಬದಲು ಜಾತಿಯೇ ಇಲ್ಲಿ ಚರ್ಚಾ ವಿಷಯ. ಕಾಂಗ್ರೆಸ್ ಬಿಲ್ಲವರ ಮತ ಸೆಳೆಯಲು ವ್ಯವಸ್ಥಿತ ತಂತ್ರ ಹೆಣೆದಿದೆ. ಬಿಜೆಪಿಯೂ ಬಿಲ್ಲವ ಮತದತ್ತ ಗಮನ ಕೇಂದ್ರೀಕರಿಸಿದೆ. ಇನ್ನು ನಿರ್ಣಾಯಕ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತರ ಮತ ಬ್ಯಾಂಕ್ ಕಾಂಗ್ರೆಸ್​ಗೆ ಶಕ್ತಿ ತುಂಬಿದರೆ, ಬಿಜೆಪಿಯ ಹಿಂದುತ್ವದ ಟ್ರಂಪ್​ಕಾರ್ಡ್ ಭದ್ರವಾಗಿದೆ.

     ಹಿಂದುತ್ವಕ್ಕೆ ಬದ್ಧತೆ ಮತ್ತು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯನ್ನು ಆದ್ಯತೆಯಾಗಿಸಿ ಪ್ರಧಾನಿ ಮೋದಿ ಅವರ ವಿಕಸಿತ ಭಾರತದ ಸಂಕಲ್ಪ ಸಾಕಾರಗೊಳಿಸಲು ದುಡಿಯಲಿದ್ದೇನೆ. ಕ್ಷೇತ್ರದಲ್ಲಿ ಮತದಾರರ ಬೆಂಬಲ ಹಾಗೂ ಕಾರ್ಯಕರ್ತರ ಉತ್ಸಾಹ ಗಮನಿಸುವಾಗ ಮತ್ತೊಮ್ಮೆ ಹಿಂದುತ್ವದ ಭದ್ರಕೋಟೆಯಾದ ದಕ್ಷಿಣ ಕನ್ನಡದಲ್ಲಿ ಬಿಜೆಪಿ ವಿಜಯದ ಧ್ವಜ ಹಾರಿಸುವ ವಿಶ್ವಾಸವಿದೆ.

    | ಕ್ಯಾ.ಬ್ರಿಜೇಶ್ ಚೌಟ ಬಿಜೆಪಿ ಅಭ್ಯರ್ಥಿ

    ಮೂರು ದಶಕಗಳಿಂದ ದ.ಕ. ಜಿಲ್ಲೆಗೆ ಸೂಕ್ಷ್ಮ ಪ್ರದೇಶ ಎಂಬ ಕಪ್ಪುಚುಕ್ಕೆ ಬಿದ್ದಿದೆ. ಬಿಜೆಪಿ ಆಡಳಿತದ ಸಂದರ್ಭ ಕೋಮು ಸಾಮರಸ್ಯ ಕದಡಿದೆ. ಅದನ್ನು ನಿವಾರಿಸುವುದೇ ಕಾಂಗ್ರೆಸ್ ಉದ್ದೇಶ. ಕ್ಷೇತ್ರದ ಜನ ಬದಲಾವಣೆ ಬಯಸಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಬಡವರಲ್ಲಿ ಆತ್ಮ ವಿಶ್ವಾಸ ಮೂಡಿಸಿದೆ. ಮತದಾರರು ಈ ಬಾರಿ ಕಾಂಗ್ರೆಸ್​ಗೆ ಆಶೀರ್ವಾದ ಮಾಡಲಿದ್ದಾರೆ.

    | ಪದ್ಮರಾಜ್ ಆರ್. ಕಾಂಗ್ರೆಸ್ ಅಭ್ಯರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts