More

    ಸಂತಾನ ಭಾಗ್ಯ ಕರುಣಿಸುವ ದೈವ

    ಶ್ರೀರಂಗಪಟ್ಟಣ: ತಾಲೂಕಿನ ಕೂಡಲಕುಪ್ಪೆ ಗ್ರಾಮದಲ್ಲಿರುವ ಶ್ರೀಕಾಶಿ ಚಂದ್ರಮೌಳೇಶ್ವರಸ್ವಾಮಿ ಸಂತಾನ ಭಾಗ್ಯವಿಲ್ಲದ ಅದೆಷ್ಟೋ ಕುಟುಂಬಗಳ ಪಾಲಿಗೆ ಬೆಳಕು ಕರುಣಿಸಿ ಪ್ರಸಿದ್ಧಿಯಾಗಿದ್ದು, ಕ್ಷೇತ್ರವೀಗ ಭಕ್ತಿಯ ಪೂಜಾರಾಧನೆಯ ದೈವಿಕ ತಾಣವಾಗಿದೆ.

    ಗ್ರಾಮದಲ್ಲಿ ಕಳೆದ 200 ವರ್ಷಗಳ ಹಿಂದೆ ಪ್ರತಿಷ್ಠಾಪನೆಗೊಂಡ ಈ ಕಾಶಿ ಚಂದ್ರಮೌಳೇಶ್ವರ ಸ್ವಾಮಿಯ ಸನ್ನಿಧಾನಕ್ಕೆ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಆಗಮಿಸಿ ಪೂಜೆ ಸಲ್ಲುಸುವ ಮೂಲಕ ಒಳಿತನ್ನು ಕಂಡಿದ್ದು, ಇಂದಿಗೂ ಸಾಕಷ್ಟು ಭಕ್ತರು ಕಷ್ಟಗಳ ಪರಿಹಾರಕ್ಕೆ ಭೇಟಿ ನೀಡುತ್ತಾರೆ.

    ಕಾಶಿ ಚಂದ್ರಮೌಳೇಶ್ವರಸ್ವಾಮಿಯು ಕುಟುಂಬದಲ್ಲಿ ಅನ್ಯೋನ್ಯತೆ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಗೆ ಆಶೀರ್ವದಿಸಲಿದ್ದು, ಮಕ್ಕಳಿಲ್ಲದೆ ಕೊರಗುವ ದಂಪತಿಗಳಿಗೆ ಸಂತಾನ ಭಾಗ್ಯ ನೀಡಿದ್ದಾನೆ ಎಂಬ ಮಾತು ಇಲ್ಲಿ ದಟ್ಟವಾಗಿದೆ. ಗರ್ಭದಲ್ಲೇ ಮಗು ಮೃತಪಡುವಂತಹ ಸಮಸ್ಯೆ ಎದುರಿಸುತ್ತಿದ್ದಲ್ಲಿ ಅಂತಹವರು ಕಾಶಿ ಚಂದ್ರಮೌಳೇಶ್ವರನ ದರ್ಶನ ಹಾಗೂ ಆರಾಧನೆಯಿಂದ ಸಮಸ್ಯೆಯಿಂದ ಮುಕ್ತಿ ಹೊಂದಬಹುದು ಎಂಬುದು ಇಲ್ಲಿನ ಜನರ ಬಲವಾದ ನಂಬಿಕೆ.

    ನೂರಾರು ವರ್ಷಗಳ ಹಿಂದೆ ಗ್ರಾಮದ ಕುಟುಂಬವೊಂದು ಸಂತಾನವಿಲ್ಲದೆ ಕಡು ಕಷ್ಟಗಳನ್ನು ಅನುಭವಿಸಿದ ಬಳಿಕ ವಿಶೇಷ ಲಿಂಗದಿಂದ ಒಳಿತು ಕಂಡಿದ್ದರು. ಬಳಿಕ ಗ್ರಾಮಸ್ಥರೊಂದಿಗೆ ಇಲ್ಲಿ ದೇವಾಲಯ ನಿರ್ಮಿಸಿ ಶಿವನ ಲಿಂಗ ಪ್ರತಿಷ್ಠಾಪಿಸಿದ್ದು, ಇಂದು ಹಲವು ವೈಶಿಷ್ಟ್ಯತೆಗಳ ತಾಣವಾಗಿದೆ.

    ದೇವಾಲಯ ಐತಿಹ್ಯ: ತಾಲೂಕಿನ ಕೂಡಲಕುಪ್ಪೆ ಗ್ರಾಮದಲ್ಲಿ 200 ವರ್ಷಗಳಿಗೂ ಹಿಂದೆ ಅನುಕೂಲತೆ ಸ್ಥಿತಿಯಲ್ಲಿದ್ದ ಶಿವನ ಆರಾಧಕ ಕುಟುಂಬವೊಂದು ಸಂತಾನ ಭಾಗ್ಯಕ್ಕಾಗಿ ಹಲವು ದೇಗುಲಗಳನ್ನು ಸುತ್ತಿದ್ದರು. ಕೊನೆಗೆ ಕಾಶಿಗೆ ತೆರಳಿ ಶ್ರೀವಿಶಾಲಾಕ್ಷಿ ದೇವಿ ಹಾಗೂ ಶ್ರೀಕಾಶಿ ವಿಶ್ವನಾಥಸ್ವಾಮಿಯನ್ನು ಪೂಜಿಸಿ ದರ್ಶನ ಪಡೆದು ಬಳಿಕ ತಮ್ಮೂರಿಗೆ ಹಿಂತಿರುಗುವ ವೇಳೆ ಶಿವಲಿಂಗವನ್ನು ತಮ್ಮೊಂದಿಗೆ ತಂದು ಗ್ರಾಮದಲ್ಲಿದ್ದ ಮಹದೇಶ್ವರ ಸ್ವಾಮಿಯ ಆರಾಧಕ ಕುಟುಂಬಸ್ಥರೊಂದಿಗೆ ಸೇರಿ ಪ್ರಾರ್ಥಿಸಿದರು.

    ಪವಾಡವೆಂಬಂತೆ ದಂಪತಿಗೆ ಸಂತಾನ ಪ್ರಾಪ್ತಿಯಾಯಿತು. ಇದರಿಂದ ಗ್ರಾಮದಲ್ಲಿ ನೆಲೆಸಿದ್ದ ಮಹದೇಶ್ವರ ಸ್ವಾಮಿಯ ಆರಾಧಕ ಕುಟುಂಬಸ್ಥರೆಲ್ಲರೂ ಸೇರಿ ದೇವಾಲಯ ನಿರ್ಮಾಣ ಮಾಡಿ ಶ್ರೀಕಾಶಿ ಚಂದ್ರಮೌಳೇಶ್ವರಸ್ವಾಮಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾರಂಭಿಸಿದರು. ಇದರಿಂದ ಶಾಂತಿ ನೆಮ್ಮದಿಯೊಂದಿಗೆ ಗ್ರಾಮದಲ್ಲಿ ಸಮೃದ್ಧಿ ನೆಲೆಸಿದೆ ಎಂಬುದು ಇತಿಹಾಸ.

    ನಿತ್ಯ ಮುಂಜಾನೆ ವಿಶೇಷ ಪೂಜೆ: ಶ್ರೀಕಾಶಿ ಚಂದ್ರಮೌಳೇಶ್ವರನ ದೇವಾಲಯ ಪ್ರಸ್ತುತ ಮುಜರಾಯಿ ಇಲಾಖೆ ಸುಪರ್ದಿಯಲ್ಲಿದೆ. ಈ ದೇಗುಲದಲ್ಲಿ ವಾರದ ಎಲ್ಲ ದಿನವೂ ಮುಂಜಾನೆ ವಿಶೇಷ ಪೂಜೆ ಇರುತ್ತದೆ. ಶಿವರಾತ್ರಿ, ಕಾರ್ತಿಕ ಮಾಸ ಹಾಗೂ ನವರಾತ್ರಿಯಲ್ಲಿ ವಿಶೇಷ ಪೂಜಾರಾಧನೆಗಳನ್ನು ದೇಗುಲದ ವೈದಿಕರು ಮಾಡುತ್ತಾರೆ. ಇನ್ನು ಪ್ರತಿ ಸೋಮವಾರ ಇಲ್ಲಿನ ವಿಶೇಷ ಲಿಂಗಕ್ಕೆ ಭಕ್ತಿಯಿಂದ ಶಿವನಿಗೆ ಪ್ರಿಯವಾದ ಬಿಲ್ವ ಪತ್ರೆಯೊಂದಿಗೆ ಪೂಜಿಸಿ ಪ್ರಾರ್ಥಿಸಿದರೆ ಕಷ್ಟಗಳು ಪರಿಹಾರವಾಗುವ ಜತೆಗೆ ದಾಂಪತ್ಯ ಜೀವನದಲ್ಲಿ ಸಂತಸ ಉಂಟಾಗುತ್ತದೆ ಎಂಬುದು ಜನರ ನಂಬಿಕೆ.

    ದೇಗುಲಕ್ಕೆ ಮಾರ್ಗ: ತಾಲೂಕಿನ ಕೂಡಲಕುಪ್ಪೆ ಗ್ರಾಮದಲ್ಲಿ ನೆಲೆ ನಿಂತಿರುವ ಈ ದೇಗುಲ ಶ್ರೀರಂಗಪಟ್ಟಣ ತಾಲೂಕು ಕೇಂದ್ರದಿಂದ 4 ಕಿ.ಮೀ. ದೂರದಲ್ಲಿದೆ. ಮೈಸೂರಿನಿಂದ 22 ಕಿ.ಮೀ ಹಾಗೂ ಮಂಡ್ಯದಿಂದ 29 ಕಿ.ಮೀ ದೂರದಲ್ಲಿದೆ. ವಿವಿಧೆಡೆಯಿಂದ ಸಾರಿಗೆ ಸೌಲಭ್ಯ ಇದೆ.

    ಕುಟುಂಬಗಳಲ್ಲಿ ಕಂಡು ಬರುವ ದಂಪತಿಗಳ ವಿರಸ ಹಾಗೂ ಆಶಾಂತಿ ನಿವಾರಣೆಗೆ ಶ್ರೀಕಾಶಿ ಚಂದ್ರಮೌಳೇಶ್ವರ ಸ್ವಾಮಿಯ ಆರಾಧನೆ ಪರಮ ಶ್ರೇಷ್ಠ. ಈ ವಿಶೇಷ ಶಿವಲಿಂಗದ ದರ್ಶನದೊಂದಿಗೆ ಪೂಜೆ ಸಲ್ಲಿಸುವುದರಿಂದ ಮನೆಯಲ್ಲಿದ್ದ ಆಶಾಂತಿ, ಜಗಳ, ಕದನ ನಿವಾರಣೆಯಾಗಿ ಜನರು ಸುಖ, ಶಾಂತಿಯಿಂದ ಜೀವನ ನಡೆಸುತ್ತಾರೆ. ಶ್ರೀಚಂದ್ರಮೌಳೇಶ್ವರನ ಆರಾಧನೆಯಿಂದ ದಂಪತಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗಿ ಉನ್ನತಿ ಕಾಣುತ್ತದೆ ಎಂಬುದಕ್ಕೆ ಹಲವು ನಿದರ್ಶನಗಳಿವೆ.
    ರಾಜಪ್ಪ ಆರಾಧ್ಯ, ದೇಗುಲದ ಅರ್ಚಕ

    200 ವರ್ಷಗಳ ಹಿಂದೆ ನಮ್ಮ ಪೂರ್ವಜರ ಕಾರಣದಿಂದ ಗ್ರಾಮದ ನಮ್ಮ ಜಮೀನಿನಲ್ಲಿ ಶ್ರೀ ಕಾಶಿ ಚಂದ್ರಮೌಳೇಶ್ವರಸ್ವಾಮಿ ನೆಲೆ ನಿಂತಿರುವುದು ನಮ್ಮ ಅದೃಷ್ಟ. ಸ್ವಾಮಿಯ ಆರಾಧನೆಯನ್ನು ಗ್ರಾಮದ ಎಲ್ಲರೂ ಜಾತಿ, ಭೇದವಿಲ್ಲದೆ ಆರಾಧಿಸಿ ಒಳಿತು ಕಂಡಿದ್ದಾರೆ. ಸ್ವಾಮಿಯ ಅನುಗ್ರಹದಿಂದ ಕಳೆದ 30 ವರ್ಷಗಳ ಹಿಂದೆ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದ್ದು, ಜನರು ಇಲ್ಲಿಗೆ ಆಗಮಿಸಿ ಒಳಿತು ಕಾಣುತ್ತಿದ್ದಾರೆ. ಕಾರ್ತಿಕ ಮಾಸದಲ್ಲಿ ನಮ್ಮ ಕುಟುಂಬಸ್ಥರು ಕೀರ್ತಿಕೆ ಮಾಡಿ ನಡೆಸುವ ದೀಪೋತ್ಸವದಿಂದ ಸಮೃದ್ಧಿ ಕಂಡಿದ್ದೇವೆ.
    ಆದಿಶೇಷ, ಗ್ರಾಮದ ಮುಖಂಡ

    ಕೂಡಲಕುಪ್ಪೆ ಗ್ರಾಮದಲ್ಲಿ ಪ್ರತಿಷ್ಠಾಪನೆಗೊಂಡ ಶ್ರೀಕಾಶಿಚಂದ್ರಮೌಳೇಶ್ವರ ಸ್ವಾಮಿಯ ಆರಾಧನೆಯನ್ನು ಗ್ರಾಮಸ್ಥರೆಲ್ಲರೂ ಸಂಭ್ರಮದಿಂದ ಆಚರಿಸುತ್ತೇವೆ. ಸ್ವಾಮಿಗೆ ಶಿವರಾತ್ರಿ ಸಮಯದಲ್ಲಿ ವಿಶೇಷ ಪೂಜಾರಾಧನೆ ಸಲ್ಲಿಸುವ ಮೂಲಕ ಜಾಗರಣೆ ನಡೆಸುವ ನಾವು ಮಾರನೇಯ ದಿನ ಸ್ವಾಮಿಯ ಹೆಸರಲ್ಲಿ ಪರ ನಡೆಸಿ ಸಾಮೂಹಿಕವಾಗಿ ಅನ್ನದಾನ ನಡೆಸಿ ಒಳಿತು ಕಂಡಿದ್ದೇವೆ.
    ಸೋಮಶೇಖರ್, ಗ್ರಾಮದ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts