More

    ರೋಗವಿಲ್ಲದ ಬದುಕು ನೀಡುವ ಯೋಗ

    ಶ್ರೀರಂಗಪಟ್ಟಣ: ಯೋಗದಿಂದ ಮನುಷ್ಯ ರೋಗವಿಲ್ಲದ ಬದುಕನ್ನು ರೂಪಿಸಿಕೊಳ್ಳುವ ಅವಕಾಶವಿದ್ದು, ಪ್ರತಿಯೊಬ್ಬರೂ ನಿರಂತರವಾಗಿ ಯೋಗವನ್ನು ಅಭ್ಯಾಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.

    10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ, ತ್ರಿನೇತ್ರ ಇಂಟರ್ ನ್ಯಾಷನಲ್ ಯೋಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸಹಯೋಗದೊಂದಿಗೆ ಮಂಗಳವಾರ ಪಟ್ಟಣದ ಹೊರವಲಯದ ಪೂರ್ವವಾಹಿನಿಯ ಚಂದ್ರವನ ಆಶ್ರಮ ಆವರಣದಲ್ಲಿ ಆಯೋಜಿಸಿದ್ದ ಯೋಗೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಯೋಗ ಪಿತಾಮಹ ಪತಂಜಲಿ ಮಹರ್ಷಿ ಮತ್ತು ಧನ್ವಂತರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

    ಜೂ.21ರಂದು ವಿಶ್ವ ಯೋಗ ದಿನವಿದೆಯಾದರೂ ಮುಂಚಿತವಾಗಿ ಯೋಗೋತ್ಸವ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಯೋಗದ ಬಗ್ಗೆ ಅರಿವು ಮೂಡಿಸುವ ಜತೆಗೆ ಅಭಿರುಚಿ ಬೆಳೆಸಿಕೊಳ್ಳುವ ಮೂಲಕ ಇದನ್ನು ಬದುಕಿನ ಭಾಗವನ್ನಾಗಿಸಿಕೊಳ್ಳಬೇಕು. ವಿಶ್ವಕ್ಕೆ ಭಾರತ ಯೋಗ ಗುರುವಾಗಿದ್ದು, ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ಮಾತ್ರವಲ್ಲದೆ ದೇಹ, ಮನಸ್ಸು ಮತ್ತು ಆತ್ಮವನ್ನು ಒಗ್ಗೂಡಿಸುವ ಪ್ರಕ್ರಿಯೆಯಾಗಿದೆ. ಆಧುನಿಕ, ಯಾಂತ್ರಿಕ ಹಾಗೂ ತಾಂತ್ರಿಕವಾಗಿ ಭಾರತ ವಿಶ್ವದಲ್ಲಿ ಮುನ್ನಡೆಯುತ್ತಿದ್ದರೂ ಪ್ರತಿಯೊಬ್ಬರೂ ಒತ್ತಡದಲ್ಲಿ ಜೀವನ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯೋಗ ಒತ್ತಡ ರಹಿತ ಬದುಕು ನಿರ್ವಹಿಸಲಿದೆ. ಅಲ್ಲದೆ ಒಳ್ಳೆಯ ಆಲೋಚನೆ, ಉತ್ತಮ ಕಾರ್ಯ ಮತ್ತು ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಇದಿ ಸಹಕಾರಿಯಾಗಲಿದೆ ಎಂದರು.

    ಚಂದ್ರವನ ಆಶ್ರಮದ ಪೀಠಾಧಿಪತಿ ಡಾ.ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಯೋಗ ಯೋಗ್ಯತೆಯನ್ನು ಹೆಚ್ಚು ಮಾಡಲಿದೆ ಯೋಗದಲ್ಲಿ ಆರೋಗ್ಯವಿದ್ದು, ಆರೋಗ್ಯದಿಂದ ಉತ್ತಮ ಬದುಕು ನಡೆಸಲು ಸಾಧ್ಯ. ಕೋವಿಡ್ ಸಮಯದಲ್ಲಿ ಸಾಕಷ್ಟು ಜನರು ಉಸಿರಾಟದ ತೊಂದರೆಯಿಂದ ಬಳಲಿದಾಗ ಪ್ರಾಣಾಯಾಮ ಮಾಡುವ ಮೂಲಕ ಹಲವರು ಗುಣಮುಖರಾಗಿದ್ದಾರೆ. ಯೋಗವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವವರು ಸಾಧಕರಾಗುತ್ತಾರೆ. ಯೋಗ ಆರೋಗ್ಯದ ಸಂಪತ್ತಾಗಿದ್ದು, ಯಾರು ಅದನ್ನು ಹೊಂದುತ್ತಾರೋ ಕಡೆಯವರೆಗೂ ಆರೋಗ್ಯದಲ್ಲಿ ಶ್ರೀಮಂತರಾಗಿ ಬದುಕುತ್ತಾರೆ ಎಂದರು.

    ವೇದಿಕೆ ಮೇಲಿದ್ದ ಎಲ್ಲ ಅತಿಥಿಗಣ್ಯರು ತಾಡಸನ, ಅರ್ಧ ಚಕ್ರಾಸನ, ಉದ್ದಂಡಾಸನ, ಪದ್ಮಾಸನ, ಪರ್ವಾತಾಸನ, ನಾಡಿ ಶೋಧನಾ ಪ್ರಾಣಾಯಾಮ ಸೇರಿದಂತೆ ಯೋಗದ ವಿವಿಧ ಭಂಗಿಗಳನ್ನು ಅಭ್ಯಾಸ ಮಾಡಿದರು. ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ತುಮಕೂರು, ಬೆಂಗಳೂರು, ಕೋಲಾರ ಜಿಲ್ಲೆಗಳ ವಿವಿಧ ಶಾಲಾ-ಕಾಲೇಜು ಹಾಗೂ ಸಂಘ ಸಂಸ್ಥೆಗಳಿಂದ ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳು ಮತ್ತು ಪಟುಗಳು ಯೋಗೋತ್ಸವದಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಶ್ರೀಮಠದಿಂದ ಜಾಥಾ ಮೂಲಕ ಯೋಗದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಯಿತು.

    ಕಾರ್ಯಕ್ರಮದಲ್ಲಿ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಅಹಲ್ಯಾ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಪಂಚಾಯಿತಿ ಮುಖ ್ಯಕಾರ್ಯ ನಿರ್ವಹಣಾ ಧಿಕಾರಿ ಶೇಕ್ ತನ್ವಿರ್ ಆಸಿಫ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮೀ, ಮೈಸೂರಿನ ಜಿ.ಎ.ಆರ್.ಸಿ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶಣೈ, ಪುರಸಭೆ ಮುಖ್ಯಅಧಿಕಾರಿ ಎಂ.ರಾಜಣ್ಣ, ತ್ರಿನೇತ್ರ ಅಂತಾರಾಷ್ಟ್ರೀಯ ಯೋಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಎನ್.ನಾಗೇಶ್, ಪ್ರಾಂಶುಪಾಲೆ ಡಾ.ಎಂ.ಎಸ್.ಮಧುಮತಿ, ಮಠದ ಕಾರ್ಯದರ್ಶಿ ಟಿ.ಪಿ.ಶಿವಕುಮಾರ್ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts