

ಅರ್ಕಾವತಿ ನದಿ ಸೇತುವೆಯಲ್ಲಿ ಸಂಗ್ರಹ
ಭದ್ರತಾ ದೃಷ್ಟಿಯಿಂದ ತೆರವಿಗೆ ಸಾರ್ವಜನಿಕರ ಆಗ್ರಹ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ನದಿಯಲ್ಲಿ ನೀರು ಸರಾಗವಾಗಿ ಹರಿಯಲು ಜೊಂಡು ಸಮಸ್ಯೆಯಾಗಿದ್ದು, ಇದನ್ನು ತೆರವುಗೊಳಿಸದಿದ್ದರೆ ಸೇತುವೆ ಭದ್ರತೆಗೂ ಧಕ್ಕೆಯಾಗುವ ಆತಂಕ ಎದುರಾಗಿದೆ.
ಅರ್ಕಾವತಿ ನದಿ ಉಕ್ಕಿ ಹರಿದ ಪರಿಣಾಮ ನಗರದ ಪ್ರಮುಖ ಸಂಪರ್ಕ ಕೊಂಡಿಯಾದ ಸೇತುವೆ ಕಂಬಗಳಲ್ಲಿ ಅಪಾರ ಪ್ರಮಾಣದಲ್ಲಿ ಜೊಂಡು ಸಂಗ್ರಹಗೊಂಡು ನೀರಿನ ಸರಾಗ ಹರಿವಿಗೆ ತೊಡಕಾಗಿದೆ. ಸೇತುವೆಗಳ ಭದ್ರತಾ ದೃಷ್ಟಿಯಿಂದ ಕೂಡಲೇ ನಗರಸಭೆ ಜೊಂಡನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮಂಚನಬೆಲೆ ಜಲಾಶಯದಿಂದ ನದಿಗೆ ನೀರು ಬಿಟ್ಟ ಪರಿಣಾಮ ಮೂರು ದಿನ ನದಿ ಉಕ್ಕಿ ಹರಿದಿತ್ತು. ಅರ್ಕಾವತಿ ನದಿ ರಾಮನಗರದ ಮಧ್ಯ ಭಾಗದಲ್ಲಿ ಹಾದುಹೋಗಿದೆ. ಇಲ್ಲಿ ಜನರ ಸುಗಮ ಸಂಚಾರಕ್ಕಾಗಿ ಸುಮಾರು 6 ಸೇತುವೆಗಳನ್ನು ನಿರ್ಮಿಸಲಾಗಿದ್ದು, ಅಷ್ಟೂ ಸೇತುವೆಯ ಕಂಬಗಳ ಬಳಿ ಜೊಂಡು ಸಂಗ್ರಹಗೊಂಡಿದೆ.
ಸ್ವಚ್ಛತೆಯೂ&ಸಮಸ್ಯೆಯೂ: ಈ ಹಿಂದೆ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದ ಕಾರಣ ಅಲ್ಲಲ್ಲಿ ಜೊಂಡು, ಲಾಳ, ಪಾಚಿ ಬೆಳೆದಿತ್ತು. ಇತ್ತೀಚೆಗೆ ಮಳೆ ಬಂದು ನೀರು ರಭಸವಾಗಿ ಹರಿದ ಸಂದರ್ಭದಲ್ಲಿ ಜೊಂಡು ನಾಶವಾಗಿ ನದಿಯೊಡಲು ಸ್ವಚ್ಛವಾಗಿದೆ. ಆದರೆ, ಸೇತುವೆ ಬಳಿ ಕಟ್ಟಿಕೊಂಡು ಸಮಸ್ಯೆ ಸೃಷ್ಟಿಯಾಗಿದೆ.
ಸಾಂಕ್ರಾಮಿಕ ಭೀತಿ: ರಾಮನಗರದ ಹಳೇ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣ, ಪೇಟೆ ಬೀದಿಗೆ ಸಂಪರ್ಕಿಸುವ, ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣವಾಗಿರುವ ಸೇತುವೆ ಬಳಿ ಟನ್ಗಟ್ಟಲೇ ಜೊಂಡು ಹಾಗೂ ಇನ್ನಿತರ ತ್ಯಾಜ್ಯ ಸಂಗ್ರಹಗೊಂಡಿದೆ. ಸೇತುವೆ ಪಕ್ಕದಲ್ಲಿ ಜಲಮಂಡಳಿ ಕುಡಿಯುವ ನೀರಿನ ಬೃಹತ್ ಪೈಪ್ ಅಳವಡಿಸಲು ಸಿಮೆಂಟ್ ಕಂಬ ಹಾಕಿರುವಲ್ಲೂ ರಾಶಿ ರಾಶಿಯಲ್ಲಿ ಸಿಕ್ಕಿಹಾಕಿಕೊಂಡಿದೆ. ಈಗ ಬಿಸಿಲು ಇರುವ ಕಾರಣ ತ್ಯಾಜ್ಯ ಕೊಳೆತು ಗಬ್ಬು ನಾರುತ್ತಿದ್ದು, ಸ್ಥಳಿಯರಲ್ಲಿ ಸಾಂಕ್ರಮಿಕ ಭೀತಿ ಆವರಿಸಿದೆ.
ತ್ಯಾಜ್ಯ ಸಂಗ್ರಹವಾಗಿರುವ ಪರಿಣಾಮ ನದಿಯಲ್ಲಿ ನೀರು ಸರಾಗವಾಗಿ ಹರಿಯಲು ಸಮಸ್ಯೆಯಾಗಿದೆ. ಈಗ ಮಳೆ ಬಂದು ನೀರು ಹೆಚ್ಚಾದರೆ ಸೇತುವೆ ಮೇಲೆಯೇ ಹರಿದು ಅಕ್ಕಪಕ್ಕಕ್ಕೂ ಸಮಸ್ಯೆಯಾಗುವ ಸಾಧ್ಯತೆ ಹೆಚ್ಚಿದೆ. ಕೂಡಲೇ ನಗರಸಭೆ ಜೊಂಡು ಹಾಗೂ ಕಸ ತೆಗೆಸಬೇಕು ಎನ್ನುತ್ತಾರೆ ಸುರೇಶ್.
ಗ್ರಾಮಸ್ಥರಿಂದ ಸ್ವಚ್ಛತೆ: ಗ್ರಾಮೀಣ ಪ್ರದೇಶಗಳಲ್ಲೂ ಇಂತಹುದೇ ಸಮಸ್ಯೆ ಸೃಷ್ಟಿಯಾಗಿತ್ತು. ಆದರೆ, ಸ್ಥಳಿಯರು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಜೆಸಿಬಿ ಮೂಲಕ ಜೊಂಡು, ಕಸ ಕಡ್ಡಿ ತೆರವು ಮಾಡಿಸಿ ಸರಾಗವಾಗಿ ನದಿಯಲ್ಲಿ ನೀರು ಹರಿದುಹೋಗುವಂತೆ ಕ್ರಮ ಕೈಗೊಂಡಿದ್ದಾರೆ.
ಅರ್ಕಾವತಿ ಸೇತುವೆ ರಾಮನಗರ ಸಂಪರ್ಕಿಸುವ ಪ್ರಮುಖ ಮಾರ್ಗ. ಇಂತಹ ಸೇತುವೆಯಲ್ಲಿ ರಾಶಿಗಟ್ಟಲೆ ಕಸ, ಜೊಂಡು ಸೇರಿ ನದಿಯಲ್ಲಿ ಸಂಗ್ರಹವಾಗಿದ್ದು, ಮತ್ತಷ್ಟು ನೀರು ಹರಿದುಬಂದರೆ ಸೇತುವೆಗೆ ಹಾನಿಯಾಗುವ ಜತೆಗೆ ಅಕ್ಕಪಕ್ಕದ ಪ್ರದೇಶಕ್ಕೂ ನೀರು ನುಗ್ಗುವುದು ಖಚಿತ. ಕೂಡಲೇ ನಗರಸಭೆ ಅಗತ್ಯ ಕ್ರಮ ಕೈಗೊಂಡು ಸ್ವಚ್ಛತಾ ಕಾರ್ಯಕೈಗೊಳ್ಳಬೇಕು.
ಕಾಳಯ್ಯ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ, ರಾಮನಗರ
ಸೇತುವೆಗಳ ಬಳಿ ಜೊಂಡು, ತ್ಯಾಜ್ಯ ಸಂಗ್ರಹವಾಗಿರುವುದು ಗಮನಕ್ಕೆ ಬಂದಿದೆ. ನೀರು ಹರಿಯುತ್ತಿದ್ದ ಸಂದರ್ಭದಲ್ಲೇ ಕಸ ತೆರವಿಗೆ ಪ್ರಯತ್ನಿಸಲಾಯಿತು. ನೀರಿನ ಪ್ರಮಾಣ ಹೆಚ್ಚಿದ್ದು, ನದಿ ಆಳವಾಗಿರುವ ಕಾರಣ ಸಾಧ್ಯವಾಗಲಿಲ್ಲ. ದೊಡ್ಡ ದೊಡ್ಡ ಹಿಟಾಚಿ ಯಂತ್ರಗಳ ಮೂಲಕ ತೆರವು ಮಾಡಬೇಕು. ನೀರಿನ ಹರಿವಿನ ಪ್ರಮಾಣ ಕಡಿಮೆಯಾದ ನಂತರ ತೆರವು ಮಾಡಲಾಗುವುದು.
ಡಾ ಜಯಣ್ಣ, ಪೌರಾಯುಕ್ತರು, ನಗರಸಭೆ, ರಾಮನಗರ