JDS ಮೇಲೆ ಸಿದ್ದು ಹೂಡಿದ್ದ 'ಆತ್ಮಸಾಕ್ಷಿ ಮತ' ಅಸ್ತ್ರ ಠುಸ್​: ಹಳೆಯದ್ದನ್ನೆಲ್ಲಾ ಕೆದಕಿ ಅಣಕಿಸಿದ BJP

siddaramaiah
Published on

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ 4ನೇ ಸ್ಥಾನಕ್ಕೆ ಮೂರು ಪಕ್ಷಗಳಿಂದ ಜಿದ್ದಾಜಿದ್ದಿ ನಡೆಯಿತ್ತಾದರೂ ಬಿಜೆಪಿ ಅಭ್ಯರ್ಥಿ ಲೆಹರ್​ ಸಿಂಗ್​ ಗೆಲುವು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್​ನ ಎರಡನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ವಿಪಕ್ಷ ನಾಯಕ ಸಿದ್ದರಾಮಯ್ಯ ಹೂಡಿದ್ದ 'ಆತ್ಮಸಾಕ್ಷಿ ಮತ' ಅಸ್ತ್ರ ವಿಫಲವಾಗಿದೆ. ಮತದಾನ ನಡೆಯುತ್ತಿರುವಾಗಲೇ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸರಣಿ ಟ್ವೀಟ್​ ಮಾಡಿರುವ ರಾಜ್ಯ ಬಿಜೆಪಿ, ಸಿದ್ದರಾಮಯ್ಯರ ಆತ್ಮಸಾಕ್ಷಿಯನ್ನು ಅಣಕಿಸಿದ್ದಾರೆ.

2012ರ ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ನಿಮ್ಮ ಆಪ್ತರಿಗೆ ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಇಕ್ಬಾಲ್ ಅಹ್ಮದ್ ಸರಡಗಿ ಅವರನ್ನು ಅಡ್ಡಮತದಾನದ ಮೂಲಕ ಸೋಲಿಸಿದ್ದಿರಿ. ಮಾನ್ಯ @siddaramaiah ಅವರೇ, ಇದು ನಿಮ್ಮ ಆತ್ಮಸಾಕ್ಷಿಯೇ? ನಾನು ಪ್ರಾಮಾಣಿಕ, ಪ್ರಾಮಾಣಿಕ ಎಂದು ಸುಳ್ಳು ಹೇಳುತ್ತಲೇ ಅರ್ಕಾವತಿ ರೀಡು ಪ್ರಕರಣದಲ್ಲಿ ಸಾವಿರಾರು ಕೋಟಿ ಕೈ ಬದಲಾಗುವಂತೆ ನೋಡಿಕೊಂಡಿರಿ. ಆಹಾ ಸಿದ್ದರಾಮಯ್ಯ ಅವರೇ ಎಂಥಹ ಆತ್ಮಸಾಕ್ಷಿ ನಿಮ್ಮದು! ಸಿದ್ದರಾಮಯ್ಯ ಅವರು ತಾನು ಸಾಮಾಜಿಕ ನ್ಯಾಯದ ಪರ ಎಂದು ಘೋಷಿಸಿಕೊಂಡು ವಿದ್ಯಾರ್ಥಿಗಳ ಪ್ರವಾಸ ಯೋಜನೆಯಲ್ಲೂ ಜಾತಿ ಹುಡುಕಿದರು. ಶಾದಿಭಾಗ್ಯ ಯೋಜನೆ ತಂದು ಹೆಣ್ಣು ಮಕ್ಕಳಲ್ಲೂ ಧರ್ಮ ಹುಡುಕಿದರು. ಇದೇನಾ ನಿಮ್ಮ ಆತ್ಮಸಾಕ್ಷಿ? ಎಂದು ಬಿಜೆಪಿ ಕೆಣಕಿದೆ.

ಕಾಂಗ್ರೆಸ್ ನಡಿಗೆ-ಕೃಷ್ಣೆಯ ಕಡೆಗೆ ಪಾದಯಾತ್ರೆ ಸಂದರ್ಭದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ಪೂರ್ಣಗೊಳಿಸಲು ವಾರ್ಷಿಕ 10 ಸಾವಿರ ಕೋಟಿ ಅನುದಾನ ನೀಡುತ್ತೇನೆ ಎಂದವರು ಅಧಿಕಾರಕ್ಕೆ ಬಂದಾಗ ನೀಡಿದ್ದೆಷ್ಟು ಎಂದು ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಲು ಸಿದ್ಧರಿರುವರೇ? ಮಾಂಸ ತಿಂದು ಪವಿತ್ರ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದ @siddaramaiah ಅವರು ಈಗ ಚುನಾವಣೆಯ ಹೊಸ್ತಿಲಲ್ಲಿ ನಾನೂ ಹಿಂದೂ ಎಂದು ಹೇಳಿಕೊಳ್ಳುತ್ತಿದ್ದಾರೆ. ಹಿಂದೂಗಳ ಭಾವನೆಗಳಿಗೆ ಧಕ್ಕೆಯಾದಾಗ ಸಿದ್ದರಾಮಯ್ಯ ಅವರ ಆತ್ಮಸಾಕ್ಷಿ ಎಲ್ಲಿತ್ತು? ನಾನು ವಿತ್ತೀಯ ಶಿಸ್ತಿನ ಮಿತಿಯಲ್ಲೇ ಬಜೆಟ್ ಮಂಡಿಸಿದ್ದೇನೆ ಎನ್ನುತ್ತಿದ್ದ ಸಿದ್ದರಾಮಯ್ಯ ಅವರ ಕಾಲದಲ್ಲೇ ರಾಜ್ಯದ ಒಟ್ಟು ಸಾಲ 2 ಲಕ್ಷ ಕೋಟಿ ದಾಟಿತ್ತು. ಇದೆಂತಹ ಆತ್ಮಸಾಕ್ಷಿ? ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಎಸ್‌ಡಿಪಿಐ, ಪಿಎಫ್ಐನಂತಹ ಮತಾಂಧ ಸಂಘಟನೆಗಳ‌ ಕಾರ್ಯಕರ್ತರ ಮೇಲಿದ್ದ ಕ್ರಿಮಿನಲ್‌ ಪ್ರಕರಣಗಳನ್ನು ಹಿಂದಕ್ಕೆ ತೆಗೆದುಕೊಂಡರು. ಈಗ ಬಿಜೆಪಿ ಸರ್ಕಾರ ಇವುಗಳನ್ನು ಬ್ಯಾನ್ ಮಾಡಬೇಕು ಎಂದು ಆಗ್ರಹಿಸುವಾಗ #ಸಿದ್ದುಆತ್ಮಸಾಕ್ಷಿ ಎಲ್ಲಿತ್ತು? ಎಂದು ರಾಜ್ಯ ಬಿಜೆಪಿ ಪ್ರಶ್ನೆಗಳ ಮಳೆಯನ್ನೇ ಸುರಿಸಿದೆ.

70 ಲಕ್ಷದ ಹುಬ್ಲೋಟ್ ಕೈಗಡಿಯಾರವನ್ನು ಗಿಫ್ಟ್ ಹೆಸರಿನಲ್ಲಿ ತೆಗೆದುಕೊಂಡು ಕೈಗೆ ಕಟ್ಟಿಕೊಳ್ಳುವಾಗ @siddaramaiah ಆತ್ಮಸಾಕ್ಷಿ ಎಲ್ಲಿತ್ತು? ಕೆಪಿಸಿಸಿಯ ಅಂದಿನ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರು @siddaramaiah ಅವರನ್ನು ಸೋದರನಂತೆ ನೋಡಿಕೊಂಡರು. ಆದರೆ ಸಿದ್ದರಾಮಯ್ಯ ಅವರು ದಲಿತ ನಾಯಕನನ್ನೇ ವಂಚನೆಯಿಂದ ಸೋಲಿಸಿದರು. ದಲಿತ ನಾಯಕನ ಬೆನ್ನಿಗೆ ಚೂರಿ ಹಾಕಿದ್ದು ಆತ್ಮಸಾಕ್ಷಿಯೇ? ನಾನು ರೈತ ಪರ. ನಾನು ನಂಜುಂಡಸ್ವಾಮಿ ಅವರ ಶಿಷ್ಯ ಎಂದು ಭಾಷಣ ಬಿಗಿಯುವ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ರೈತರು ಕುಡಿದು ಸತ್ತರು ಎಂದು ಹೇಳಿಕೆ ನೀಡಿ ರೈತರಿಗೆ ಅವಮಾನ ಮಾಡಿದ್ದರು. ಸಿದ್ದರಾಮಯ್ಯನವರೇ, ಇದೇನಾ ನಿಮ್ಮ ಆತ್ಮಸಾಕ್ಷಿ? ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಆದಾಗ, ಅಂದಿನ ಗೃಹ ಸಚಿವ ಜಾರ್ಜ್ ಹಿಂದೆ ನಿಂತಾಗ @siddaramaiah ಅವರ ಆತ್ಮಸಾಕ್ಷಿ ಎಲ್ಲಿತ್ತು? 2013 ರಿಂದ 2017 ರ ಅವಧಿಯಲ್ಲಿ ಕರ್ನಾಟಕದಲ್ಲಿ 3 ಸಾವಿರಕ್ಕೂ ರೈತರ ಆತ್ಮಹತ್ಯೆ ಪ್ರಕರಣಗಳು ನಡೆದಿತ್ತು. ಅನ್ನದಾತರು ಆತ್ಮಹತ್ಯೆ ಮಾಡಿಕೊಳ್ಳುವಾಗ @siddaramaiah ಅವರ ಆತ್ಮಸಾಕ್ಷಿ ಎಲ್ಲಿತ್ತು?... ಹೀಗೆ ಸಾಲು ವಿಚಾರವನ್ನ ಪರಸ್ತಾಪಿಸುತ್ತಾ ಸಿದ್ದರಾಮಯ್ಯರನ್ನು ಬಿಜೆಪಿ ಕೆಣಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net