

ಬೆಂಗಳೂರು: ರಾಜ್ಯಸಭೆ ಚುನಾವಣಾ ಕಣ ರಂಗೇರಿದ್ದು, ಜೆಡಿಎಸ್ ಅನ್ನು ಕಟ್ಟಿಹಾಕಲು ರಣತಂತ್ರ ರೂಪಿಸಿರುವ ಕಾಂಗ್ರೆಸ್ 2ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಬಿಜೆಪಿಯಿಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಚಿತ್ರನಟ ಜಗ್ಗೇಶ್ ಅಭ್ಯರ್ಥಿಗಳಾಗಿದ್ದಾರೆ. ಕಾಂಗ್ರೆಸ್ನಿಂದ ಜೈರಾಮ್ ರಮೇಶ್ ಅವರಿಗೆ ಟಿಕೆಟ್ ಕೊಟ್ಟರೆ, ಜೆಡಿಎಸ್ನಿಂದ ಕುಪೇಂದ್ರ ರೆಡ್ಡಿ ಅವರಿಗೆ ಟಿಕೆಟ್ ಸಿಕ್ಕಿದೆ. ಇದೀಗ ಜೆಡಿಎಸ್ ಅಭ್ಯರ್ಥಿಯನ್ನ ಸೋಲಿಸಲು ರಣತಂತ್ರ ಹೆಣೆದಿರುವ ಕಾಂಗ್ರೆಸ್, 2ನೇ ಅಭ್ಯರ್ಥಿಯನ್ನಾಗಿ ರೆಹಮಾನ್ ಖಾನ್ ಪುತ್ರ ಮನ್ಸೂರ್ ಅಲಿ ಖಾನ್ ಅವರನ್ನ ಆಯ್ಕೆ ಮಾಡಿದೆ.
ಕಾಂಗ್ರೆಸ್ ಅಭ್ಯರ್ಥಿಗಳಾದ ಜೈರಾಮ್ ರಮೇಶ್ ಹಾಗೂ ಮನ್ಸೂರ್ ಅಲಿ ಖಾನ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ವಿಧಾನಸೌಧದ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸೋಮವಾರ ‘ಬಿ’ ಫಾರಂ ನೀಡಿದ್ದು, ಇಬ್ಬರು ಅಭ್ಯರ್ಥಿಗಳೂ ನಾಮಪತ್ರ ಸಲ್ಲಿಸಿದ್ದಾರೆ.
ಜೆಡಿಎಸ್ನಿಂದ ಕುಪೇಂದ್ರರೆಡ್ಡಿಯನ್ನು ಕಣಕ್ಕಿಳಿಸುವ ಸಂಬಂಧ ದೇವೇಗೌಡರ ಮನೆಯಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಯುತ್ತಿದ್ದರೆ, ಅತ್ತ ರಣತಂತ್ರ ರೂಪಿಸಿರುವ ಕಾಂಗ್ರೆಸ್ ಕೂಡ ಗೌಪ್ಯಸಭೆ ನಡೆಸುತ್ತಿದೆ. ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಹಿನ್ನೆಲೆಯಲ್ಲಿ ಕುಪೇಂದ್ರರೆಡ್ಡಿಗೆ ಸಂಕಷ್ಟ ಎದುರಾಗುತ್ತೆ ಎನ್ನಲಾಗುತ್ತಿದೆ.