ಮಳೆ ಮುನ್ಸೂಚನೆ, ತುರ್ತಾಗಿ ಸ್ಪಂದಿಸಲು ಜಿಲ್ಲಾಡಳಿತಗಳಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ: ಅಶೋಕ್

Ashok
Published on

ಬೆಂಗಳೂರು: ಹವಾಮಾನ ಇಲಾಖೆ ಘೋಷಿಸಿದ ರೆಡ್ ಅಲರ್ಟ್, ಯೆಲ್ಲೋ ಅಲರ್ಟ್ ಮಳೆ ಮುನ್ಸೂಚನೆ ಇರುವೆಡೆ ಬೆಂಗಳೂರು ಸೇರಿ ಸಂಬಂಧಿಸಿದ ಜಿಲ್ಲಾಡಳಿತಗಳಿಗೆ ತುರ್ತಾಗಿ ಸ್ಪಂದಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದ ಅಶೋಕ್​, ಮಳೆ ಮುನ್ಸೂಚನೆ ಲಭ್ಯವಾಗುತ್ತಿದ್ದಂತೆ ಆಯಾ ಜಿಲ್ಲಾ ಆಡಳಿತಗಳು ಏನೆಲ್ಲ ಸಿದ್ಧತೆ ಮಾಡಿಕೊಂಡಿವೆ ಎಂಬ ಮಾಹಿತಿ ತರಿಸಿಕೊಳ್ಳಲಾಗಿದೆ. ಇನ್ನೂ 2-3 ದಿನ ಮಳೆಯಾಗುವ ಸಾಧ್ಯತೆಯಿದ್ದು, ಅಗತ್ಯ ಸುರಕ್ಷತಾ ಕ್ರಮ ವಿಶೇಷವಾಗಿ ತಗ್ಗು ಪ್ರದೇಶದ ಬಡಾವಣೆ, ಹಳ್ಳಿಗಳತ್ತ ನಿಗಾವಹಿಸಲು ಸೂಚಿಸಿದ್ದಾರೆ ಎಂದರು.

ಬೆಂಗಳೂರಿನಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು ಸೇರಿ ಎಲ್ಲ ಸಿಬ್ಬಂದಿ ಕ್ಷೇತ್ರ ಕಾರ್ಯಕ್ಕೆ ಇಳಿದಿದ್ದಾರೆ. ಕೆಲವು ಪ್ರದೇಶಗಳಲ್ಲಿ 103 ಮಿಲಿ ಮೀಟರ್​ಗಿಂತ ಅಧಿಕ ಮಳೆಯಾಗಿರುವ ಕಾರಣ ಸಮಸ್ಯೆಯಾಗಿದೆ. ತಗ್ಗುಪ್ರದೇಶದ ಜನರ ಸುರಕ್ಷತೆಗೆ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ನಿಂತ ನೀರನ್ನು ಎತ್ತಿ ಹಾಕಲು ಪಂಪ್ ಮೋಟಾರ್ ಬಳಸಲಾಗಿದೆ. ಮಳೆ ಬಾಧಿತ ಹೊಸಕೆರೆಹಳ್ಳಿ ಹಾಗೂ ಆರ್.ಆರ್. ನಗರ ಬಡಾವಣೆಗಳಿಗೆ ಸಿಎಂ ಬೊಮ್ಮಾಯಿ‌ ಖುದ್ದು ಭೇಟಿ ನೀಡಿ, ನೊಂದವರಿಗೆ ಸಾಂತ್ವನ ಹೇಳಿ ಸ್ಥಳದಲ್ಲೇ ಪರಿಹಾರ ಘೋಷಿಸಲಿದ್ದಾರೆ ಎಂದು ಆರ್‌.ಅಶೋಕ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net