

ಗದಗ: ಚಿನ್ನ ಬಿಡಿ, ರಸ್ತೆಯಲ್ಲಿ ಒಂದು ನೋಟು ಸಿಕ್ಕರೂ ಅತ್ತಿತ್ತ ನೋಡಿ ಜೇಬಿಗಿಳಿಸಿಕೊಳ್ಳುವವರೂ ಇರುವಾಗ, ಇಲ್ಲೊಬ್ಬರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದ ಚೀಲವನ್ನೇ ಕಳೆದುಕೊಂಡವರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಗದಗ ನಿವಾಸಿ ಮೆಹಬೂಬ್ ಕರ್ನಾಜಿ ಎಂಬುವವರು ಇಂಥದ್ದೊಂದು ಕೆಲಸ ಮಾಡಿ ಪ್ರಾಮಾಣಿಕತೆ ಮೆರೆದಿದ್ದಷ್ಟೇ ಅಲ್ಲ, ಈ ಮೂಲಕ ಬ್ಯಾಗ್ ಕಳೆದುಕೊಂಡಿದ್ದವರ ಹಾರೈಕೆಗೂ, ಜನರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ವಿಜಯಪುರ ಜಿಲ್ಲೆಯ ಚನ್ನಬಸಪ್ಪ ಇಂಡಿ ಎನ್ನುವವರು ಗದಗ-ಮುಂಬೈ ರೈಲಿನಲ್ಲಿ ಪ್ರಯಾಣಿಸುವಾಗ ಬ್ಯಾಗ್ ಮಿಸ್ ಮಾಡಿಕೊಂಡಿದ್ದರು. ಆದರೆ ಅದೇ ಬ್ಯಾಗ್ ರೈಲು ಪ್ರಯಾಣಿಕ ಮೆಹಬೂಬ್ ಕರ್ನಾಜಿ ಅವರ ಕಣ್ಣಿಗೆ ಕಾಣಿಸಿದ್ದು, ಅವರು ಅದನ್ನು ಗದಗ ರೈಲ್ವೆ ಪೊಲೀಸರಿಗೆ ನೀಡಿದ್ದರು.
ಪೊಲೀಸರು ಬ್ಯಾಗ್ ಪರಿಶೀಲನೆ ನಡೆಸಿದಾಗ ಅದರಲ್ಲಿ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ 300 ಗ್ರಾಂ ತೂಕದ ಚಿನ್ನಾಭರಣ ಕಂಡುಬಂದಿದ್ದವು. ಕೂಡಲೇ ಗದಗ ರೈಲ್ವೆ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಡಿ.ಬಿ. ಪಾಟೀಲ್ ನೇತೃತ್ವದ ರೈಲ್ವೆ ಪೊಲೀಸರ ತಂಡ, ಆ ಚಿನ್ನಾಭರಣದ ಮಾಲೀಕರ ಪತ್ತೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿತು. ಬಳಿಕ ಚನ್ನಬಸಪ್ಪ ಇಂಡಿ ಅವರನ್ನು ಪತ್ತೆ ಮಾಡಿ, ಅವರಿಗೆ ಚಿನ್ನಾಭರಣವನ್ನು ಪೊಲೀಸರು ತಲುಪಿಸಿದ್ದಾರೆ. ಪ್ರಾಮಾಣಿಕ ರೈಲ್ವೆ ಪ್ರಯಾಣಿಕ ಮೆಹಬೂಬ್ ಹಾಗೂ ಗದಗ ಪೊಲೀಸರಿಗೆ ಚನ್ನಬಸಪ್ಪ ದಂಪತಿ ಧನ್ಯವಾದ ತಿಳಿಸಿದರು.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ