ಸ್ಕೂಟಿ ಮೇಲೆ ಮುರಿದು ಬಿದ್ದ ರೈಲ್ವೆ ಗೇಟ್, ಸವಾರರಿಬ್ಬರು ಪ್ರಾಣಾಪಾಯದಿಂದ ಪಾರು

rail gate
Published on

ಪುತ್ತೂರು ಗ್ರಾಮಾಂತರ: ಚಲಿಸುತ್ತಿದ್ದ ದ್ವಿಚಕ್ರ ವಾಹನವೊಂದರ ಮೇಲೆ ರೈಲ್ವೆ ಕ್ರಾಸಿಂಗ್ ಗೇಟ್ ಮುರಿದು ಬಿದ್ದಿದ್ದು, ಸ್ಕೂಟಿ ಸವಾರರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾದ ಘಟನೆ ನರಿಮೊಗರು ಗ್ರಾಮದ ಪುರುಷರಕಟ್ಟೆ-ಪಂಜಳ ಸಂಪರ್ಕ ರಸ್ತೆಯ ಸಾಂದೀಪನಿ ಶಾಲಾ ಬಳಿ ನಡೆದಿದೆ.

ಬೆಟ್ಟಂಪಾಡಿ ನಿವಾಸಿ ಜಗನ್ನಾಥ ಪುತ್ರನನ್ನು ಸಾಂದೀಪನಿ ಶಾಲೆಯಲ್ಲಿ ದಾಖಲಾತಿ ಮಾಡಿಸಲು ಬುಧವಾರ ಸ್ಕೂಟಿಯಲ್ಲಿ ಪುರುಷರಕಟ್ಟೆ ರಸ್ತೆಯ ಮೂಲಕ ತೆರಳುತ್ತಿದ್ದ ವೇಳೆ ರೈಲ್ವೆಯ ಗೇಟ್ ಹಾಕಲಾಗಿತ್ತು. ರೈಲು ತೆರಳಿದ ಬಳಿಕ ಗೇಟ್ ತೆರೆದು ವಾಹನಗಳು ತೆರಳುತ್ತಿದ್ದಂತೆಯೇ ಮೇಲಕ್ಕೆ ಹೋಗಿದ್ದ ಗೇಟ್ ಬುಡದ ಭಾಗದಿಂದಲೇ ತುಂಡಾಗಿ ಜಗನ್ನಾಥ ಅವರ ತಲೆ ಮೇಲೆ ಬಿದ್ದು ನಂತರ ಅವರ ಪುತ್ರನ ತಲೆ ಮೇಲೆ ಬಿದ್ದಿದೆ. ಹೆಲ್ಮೆಟ್ ಧರಿಸಿದ್ದರಿಂದ ಜಗನ್ನಾಥ ಹಾಗೂ ಅವರ ಪುತ್ರ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಘಟನೆಯ ಕುರಿತು ನರಿಮೊಗರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಪ್ರಭು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದರು. ಆರಂಭದಲ್ಲಿ ತಮ್ಮ ಇಲಾಖೆಯ ವಾಹನದ ಮೂಲಕ ರೈಲ್ವೆ ಇಲಾಖೆಯ ಆಸ್ಪತ್ರೆಗೆ ದಾಖಲಿಸುವುದಾಗಿ ತಿಳಿಸಿದ್ದ ರೈಲ್ವೆ ಇಲಾಖೆಯವರು, ನಂತರ ನಮ್ಮ ಆಸ್ಪತ್ರೆಯಿಲ್ಲ. ನೀವು ಹೇಳಿದ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದರೆ ಹೊರತು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಯಾವುದೇ ಕ್ರಮಕೈಗೊಳ್ಳಲಿಲ್ಲ ಎಂದು ಗಾಯಾಳು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net