ಆಡಳಿತದಲ್ಲಿ ಆಮೂಲಾಗ್ರ ಬದಲಾವಣೆ

02M.D.R.5
Published on

ಮದ್ದೂರು: ನಾನು ಅಧಿಕಾರ ಸ್ವೀಕರಿಸಿದ ನಂತರ ತಾಲೂಕು ಆಡಳಿತದ ಕಾರ್ಯ ವೈಖರಿಯಲ್ಲಿ ಆಮೂಲಾಗ್ರ ಬದಲಾವಣೆ ತಂದು ಸಾರ್ವಜನಿಕರು, ರೈತರಿಗೆ ಅನುಕೂಲ ಕಲ್ಪಿಸುತ್ತಿದ್ದೇನೆ ಎಂದು ತಹಸೀಲ್ದಾರ್ ಸೋಮಶೇಖರ್ ತಿಳಿಸಿದರು.


ಆಡಳಿತದಲ್ಲಿ ಚುರುಕು ಮುಟ್ಟಿಸುವ ಉದ್ದೇಶದಿಂದ ತಾಲೂಕು ಕಚೇರಿಗೆ ಹೊಸ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಅಧಿಕಾರಿಗಳ ಚಲನ ವಲನಗಳನ್ನು ಗುರುತಿಸಲಾಗುತ್ತಿದೆ. ಸಾರ್ವಜನಿಕ ಅರ್ಜಿಗಳ ಶೀಘ್ರ ವಿಲೇವಾರಿ, ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ, ಕಚೇರಿ ಪಕ್ಕವಿರುವ ಸಾರ್ವಜನಿಕ ಶೌಚಗೃಹದ ಸಮರ್ಪಕ ನಿರ್ವಹಣೆ, ಕುಡಿಯುವ ನೀರಿನ ವ್ಯವಸ್ಥೆ, ವಾಹನಗಳ ನಿಲುಗಡೆಗೆ ಕ್ರಮ, ದಾಖಲಾತಿ ಕೊಠಡಿಗಳಿಗೆ ಹೊಸ ರೂಪ ನೀಡಲಾಗಿದೆ. ಸಾರ್ವಜನಿಕರು ಮತ್ತು ರೈತರು ತಮ್ಮ ಕೆಲಸ ಮಾಡಿಸಿಕೊಳ್ಳಲು ಅನಗತ್ಯವಾಗಿ ಕಚೇರಿಗೆ ಬರುವುದನ್ನು ತಪ್ಪಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ನಾನು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ 250ಕ್ಕೂ ಹೆಚ್ಚು ಪ್ರಕರಣಗಳು ತಹಸೀಲ್ದಾರ್ ನ್ಯಾಯಾಲಯದಲ್ಲಿದ್ದವು. ಈಗಾಗಲೇ 150 ಪ್ರರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಉಳಿದ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲಾಗುವುದು ಎಂದರು.


2017ರಿಂದ ಅಕ್ರಮ ಸಕ್ರಮ ಯೋಜನೆಯಡಿ ಮನೆಗಳಿಗಾಗಿ 94ಸಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇನೆ ಎಂದರು.


ತಾಲೂಕು ಕಚೇರಿಯ ನವೀಕರಣಕ್ಕಾಗಿ ಶಾಸಕ ಕೆ.ಎಂ.ಉದಯ್ ಅವರಿಗೆ ಮನವಿ ಮಾಡಿದ್ದು, ಶಾಸಕರು ಕಂದಾಯ ಸಚಿವರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದು ಬಂದಿದ್ದು, ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಹೈಟೆಕ್ ಸ್ಪರ್ಶ ಪಡೆದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಸಾರ್ವಜನಿಕರ ಸಮಸ್ಯೆ ಗೊತ್ತಾದ ತಕ್ಷಣ ಸ್ಥಳಕೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಂಡು ತ್ವರಿತಗತಿಯಲ್ಲಿ ಬಗೆ ಹರಿಸುತ್ತಿದ್ದೇನೆ ಎಂದರು.
ಪರೀಕ್ಷಾರ್ಥ ತಹಸೀಲ್ದಾರ್ ಚಂದ್ರಶೇಖರ್, ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್, ಆಡಳಿತ ಶಿರಸ್ತೇದಾರ್ ಚಂದ್ರಶೇಖರ್, ಕಂದಾಯ ನಿರೀಕ್ಷ ಜಗದೀಶ್, ವಿಷಯ ನಿರ್ವಾಹಕ ನವೀನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net