

ಚಿಂತಾಮಣಿ: ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ವಿವಿಧ ವಾಹನಗಳ ನಿಲ್ದಾಣಕ್ಕೆ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲು 10 ಎಕರೆ ಜಾಗ ಬೇಕಿದ್ದು, ಎಷ್ಟು ಬೇಗ ನೀಡುತ್ತಾರೋ ಅಷ್ಟು ಬೇಗ ಟ್ರಕ್ ಟರ್ಮಿನಲ್ ನಿರ್ಮಾಣವಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದ ಹೊರವಲಯದ ಕೋನಪಲ್ಲಿ ಬಳಿ ನಿರ್ಮಿಸಿರುವ ನೂತನ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಎಆರ್‌ಟಿಒ ಕಚೇರಿ ಬಳಿ ಮೂರು ಎಕರೆ ಜಾಗದಲ್ಲಿ ಡ್ರೈವಿಂಗ್ ಲೈಸೆನ್ಸ್ ನೀಡಲು ಬೇಕಾಗಿರುವ ಟ್ರ್ಯಾಕ್ ನಿರ್ಮಾಣ ಮಾಡಲಾಗಿದ್ದು, ಚಾಲನಾ ಪರವಾನಗಿಗಾಗಿ ಬೇರೆ ಕಡೆ ಹೋಗಬೇಕಾದ ಪ್ರಮೇಯ ತಪ್ಪಲಿದೆ ಎಂದು ಹೇಳಿದರು.
ಸ್ಥಳೀಯವಾಗಿ 140 ವಿವಿಧ ಮಾರ್ಗಗಳ ಪೈಕಿ ಹಲವು ಮಾರ್ಗಗಳಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಸುಧಾಕರ್ ಸಚಿವರಾದ ಕೂಡಲೇ ಹಲವಾರು ಮಾರ್ಗಗಳಲ್ಲಿ ಸಂಚಾರ ಮತ್ತೆ ಆರಂಭಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಉನ್ನತಮಟ್ಟದ ಪರೀಕ್ಷಾ ಟ್ರ್ಯಾಕ್: ಸಚಿವ ಡಾ.ಎಂಸಿ.ಸುಧಾಕರ್ ಮಾತನಾಡಿ, ಚಿಂತಾಮಣಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಆರಂಭಿಸಲು 2008ರಿಂದಲೂ ಪ್ರಯತ್ನ ನಡೆಯುತ್ತಿತ್ತು. ಸಿಬ್ಬಂದಿ ಕೊರತೆಯಿಂದ ಮಂಜೂರು ಸಾಧ್ಯವಾಗಿರಲಿಲ್ಲ. 2018ರಲ್ಲಿ ಮಂಜೂರಾತಿ ಸಿಕ್ಕಿತು. ಈಗ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದರು.
2019ರಲ್ಲಿ 6.5 ಎಕರೆ ಜಮೀನು ಮಂಜೂರು, ಡ್ರೈವಿಂಗ್ ಟ್ರ್ಯಾಕ್ ಬೇಕು ಎಂದು ತಿಳಿಸಿದಾಗ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚುವರಿ 3.5 ಎಕರೆ ಜಾಗ ಗುರುತಿಸಿಕೊಡಲಾಗಿತ್ತು. 5.75 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣದ ಜತೆಗೆ ಆಧುನಿಕ ಪರೀಕ್ಷಾರ್ಥ ಟ್ರ್ಯಾಕ್ ನಿರ್ಮಾಣಕ್ಕೆ 5 ಕೋಟಿ ರೂ. ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಬಸ್ ಮತ್ತು ಲಾರಿ ಚಾಲನಾ ಪರವಾನಗಿ ಪಡೆಯಲು ಚಿಕ್ಕಬಳ್ಳಾಪುರದಲ್ಲೂ ಇಂತಹ ಟ್ರ್ಯಾಕ್ ಇರಲಿಲ್ಲ. ಆದರೀಗ ಚಿಂತಾಮಣಿಯಲ್ಲಿ ಉನ್ನತ ದರ್ಜೆಯ ಟ್ರ್ಯಾಕ್ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ.
ಚಿಂತಾಮಣಿಯ ಎಆರ್‌ಟಿಒ ಕಚೇರಿ ವ್ಯಾಪ್ತಿಗೆ ಶಿಡ್ಲಘಟ್ಟ ಮತ್ತು ಚೇಳೂರು ತಾಲೂಕನ್ನು ಸೇರಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು.
ಮುಜರಾಯಿ ದೇವಾಲಯಗಳಿಗೆ ಕಳೆದ ವರ್ಷ 50 ಲಕ್ಷ ರೂ. ನೀಡಲಾಗಿದೆ. ಹೆಚ್ಚಿನ ಅನುದಾನಕ್ಕೆ ಬೇಡಿಕೆಯಿದ್ದು, ಅದನ್ನು ನೀಡುವಂತೆ ಸಚಿವ ಸುಧಾಕರ್ ಅವರು ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಿದರು. ಸದರಿ ಸ್ಥಳದಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ ಜಾಗ, ವಾಲ್ಮೀಕಿ ಭವನಕ್ಕೆ ಹೆಚ್ಚುವರಿ ಜಮೀನು ಮತ್ತು ಹಣ ಮಂಜೂರು ಮಾಡಿಕೊಟ್ಟಿರುವುದಾಗಿ ಹೇಳಿದರು.
ಸಾರಿಗೆ ಇಲಾಖೆ ಆಯುಕ್ತ ಎ.ಎಂ. ಯೋಗೇಶ್, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಎಸ್‌ಪಿ ಕುಶಾಲ್ ಚೌಕ್ಸೆ, ಎಎಸ್‌ಪಿ ರಜಾ ಇಮಾಮ್ ಖಾಸಿಂ, ತಹಸೀಲ್ದಾರ್ ಸುದರ್ಶನ್ ಯಾದವ್, ಡಿವೈಎಸ್‌ಪಿ, ಮುರಳಿಧರ್, ತಾಪಂ ಇಒ ಆನಂದ್, ಅಪರ ಕಮಿಷನರ್ ಉಮಾಶಂಕರ್, ನಗರಸಭೆ ಅಧ್ಯಕ್ಷ ಆರ್. ಜಗನ್ನಾಥ್, ಉಪಾಧ್ಯಕ್ಷೆ ರಾಣಿಯಮ್ಮ, ಕೋನಪಲ್ಲಿ ಗ್ರಾಪಂ ಅಧ್ಯಕ್ಷೆ ಮಮತಾ, ಆರ್‌ಟಿಒ ಅಧಿಕಾರಿ ವಿವೇಕಾನಂದ ಮುಂತಾದವರು ಉಪಸ್ಥಿತರಿದ್ದರು.
ಒಂದೂ ಬಸ್ ಖರೀದಿಸಿಲ್ಲ
ಹಿಂದಿನ ಬಿಜೆಪಿ ಸರ್ಕಾರ ಬಿಎಂಟಿಸಿಗೆ ಬಸ್ ಖರೀದಿ ಮಾಡಿರುವುದನ್ನು ಬಿಟ್ಟರೆ, ನಾಲ್ಕು ವರ್ಷದ ಅಧಿಕಾರದಲ್ಲಿ ರಾಜ್ಯದ ಯಾವುದೇ ಸಾರಿಗೆ ಸಂಸ್ಥೆಗೆ ಒಂದೇ ಒಂದು ಬಸ್ ಖರೀದಿಸಲಿಲ್ಲ. 3800 ಬಸ್‌ಗಳನ್ನು ಸ್ಥಗಿತಗೊಳಿಸಿದ್ದರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹೊಸದಾಗಿ 3400 ಬಸ್‌ಗಳು ಖರೀದಿ ಮಾಡಿದ್ದು, ಇನ್ನೂ 300 ಬಸ್‌ಗಳು ಬರಲಿವೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಬಿಜೆಪಿಯಿಂದ ಅಪಪ್ರಚಾರ
ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿವಿಧ 14 ಸಾವಿರ ಮಂದಿ ನಿವೃತ್ತರಾಗಿದ್ದು, ಹೊಸ ನೇಮಕಾತಿ ನಡೆದಿಲ್ಲ. ನಾವು ಅಧಿಕಾರಕ್ಕೆ ಬಂದ ಮೇಲೆ 9 ಸಾವಿರ ಮಂದಿಗೆ ನೇಮಕಾತಿ ಆದೇಶ ನೀಡಿದ್ದೇವೆ. ಜತೆಗೆ ಅನುಕಂಪದ ಅಧಾರದ ಮೇಲೂ ಉದ್ಯೋಗ ನೀಡುತ್ತಿದ್ದೇವೆ. ಶಕ್ತಿ ಯೋಜನೆಯಡಿ ಪ್ರತಿದಿನ ಲಕ್ಷಾಂತರ ಮಹಿಳೆಯರು ಬಸ್ ಪ್ರಯಾಣ ಮಾಡುತ್ತಿದ್ದಾರೆ. ಇವೆಲ್ಲ ಅಭಿವೃದ್ಧಿಯಲ್ಲವೆ ಎಂದು ಪ್ರಶ್ನಿಸಿ, ಬಿಜೆಪಿಯವರು ಕೇವಲ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ದಿಯಾಗುತ್ತಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ರಾಮಲಿಂಗಾರೆಡ್ಡಿ ದೂರಿದರು.
ಚಿಂತಾಮಣಿಯ ಕೋನಪಲ್ಲಿ ಬಳಿ ನಿರ್ಮಿಸಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ನೂತನ ಕಚೇರಿಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು. ಸಚಿವ ಡಾ.ಎಂ.ಸಿ. ಸುಧಾಕರ್, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ನಗರಸಭೆ ಉಪಾಧ್ಯಕ್ಷೆ ರಾಣಿಯಮ್ಮ ಮತ್ತಿತರರು ಇದ್ದರು.