

ಚನ್ನಪಟ್ಟಣ: ಎಚ್‌ಎಂಟಿ ಕಾರ್ಖಾನೆಗೆ ಪುನರ್ಜನ್ಮ ಕೊಡುವ ಕೆಲಸ ಆಗುತ್ತಿದೆ. ಕುದುರೆಮುಖ ಕಾರ್ಖಾನೆಗೆ ಹಣ ಕೊಟ್ಟರೆ ರಾಜ್ಯ ಸರ್ಕಾರ ಅದನ್ನು ಸಹಿಸಲಿಲ್ಲ. ಇದು ಈ ಸರ್ಕಾರದ ಮನಸ್ಥಿತಿಗೆ ಉದಾಹರಣೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ತಾಲೂಕಿನ ಅಕ್ಕೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ನನಗೆ ಆರೋಗ್ಯ ಸಮಸ್ಯೆ ಇರುವುದರಿಂದ ವಾರ ಆಸ್ಪತ್ರೆಯಲ್ಲೇ ಇರಬೇಕಾಗಿತ್ತು. ಆದರೆ, ನಿಮ್ಮ ಮೇಲಿನ ಗೌರವಕ್ಕೆ ಇಲ್ಲಿ ಬಂದಿದ್ದೇನೆ. ಪ್ರಧಾನಿ ಮೋದಿ ಆವರು ಎರಡು ಇಲಾಖೆ ಜವಾಬ್ದಾರಿ ಕೊಟ್ಟಿದ್ದಾರೆ. ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದು, ಆಂಧ್ರದಲ್ಲಿ ಕಾರ್ಖಾನೆಯೊಂದಕ್ಕೆ ಮರು ಜೀವ ನೀಡಿದ್ದೇನೆ. ಆದ್ದರಿಂದ 25 ಸಾವಿರ ಕುಟುಂಬಗಳು ಬದುಕು ಕಟ್ಟಿಕೊಂಡಿವೆ ಎಂದರು.
ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ನಡೆದ ಹಲ್ಲೆಗೆ ಸಾಕಷ್ಟು ಹೋರಾಟ ನಡೆಯುತ್ತಿವೆ. ಕರ್ನಾಟಕ ಬಂದ್‌ಗೂ ಕರೆ ಕೊಟ್ಟಿದ್ದಾರೆ. ನಾನು ಸಿಎಂ ಆಗಿದ್ದಾಗ ಮಹಾರಾಷ್ಟ್ರದವರು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಕೇಂದ್ರಕ್ಕೆ ಮನವಿ ಕೊಟ್ಟಿದ್ದರು. ನಾನು ಬೆಳಗಾವಿ ಯಲ್ಲೇ ಅಧಿವೇಶನ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆ. ಒಂದು ವಾರದಲ್ಲೇ ವಿಧಾನಸಭೆ ಅಧಿವೇಶನ ಕೂಡ ಮಾಡಿದ್ದವು. ಬಳಿಕ ಸುವರ್ಣ ಸೌಧಕ್ಕೆ ಭೂಮಿ ಪೂಜೆ ಮಾಡಿದೆವು. ಆ ಬಳಿಕ ಬಂದ ಸರ್ಕಾರ ಅಲ್ಲಿ ನಮ್ಮ ಹೆಸರನ್ನೂ ಹಾಕಲಿಲ್ಲ. ಆದರೂ ಹೆಸರು ಜನರ ಮನಸ್ಸಿನಲ್ಲಿ ಇರಬೇಕು ಎಂದರು. ಈ ಸರ್ಕಾರದಲ್ಲಿ ಮುಖ್ಯಮಂತ್ರಿ ಗಾದಿಗೆ ಕಿತ್ತಾಡುತ್ತಿದ್ದಾರೆ. ಅಭಿವೃದ್ಧಿ ಮರೆತಿದ್ದು, ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು. ಮುಂಬರುವ ಜಿಪಂ, ತಾಪಂ ಚುನಾವಣೆಗೆ ಗೃಹಲಕ್ಷ್ಮಿ ಹಣ ಹಾಕಿ ಓಟ್ ಹಾಕಿಸಿಕೊಳ್ಳುತ್ತಾರೆ. ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ಕಷ್ಟ ಎಂದರು. ಶಾಲೆಗೆ ಶಿಕ್ಷಕರ ನೇಮಕ ಮಾಡುತ್ತಿಲ್ಲ. ರಾಜ್ಯದಲ್ಲಿ 2-4 ಲಕ್ಷ ಹುದ್ದೆ ಖಾಲಿ ಇಟ್ಕೊಂಡಿದ್ದೀರಿ. ಪ್ರಶ್ನೆ ಪತ್ರಿಕೆಗೆ ಎಷ್ಟು ಹಣ ನಿಗದಿ ಮಾಡಿದ್ದೀರಿ. ಇದೆಲ್ಲ ಸಿದ್ದರಾಮಯ್ಯ ಅವಧಿಯಲ್ಲಿ ಆಗುತ್ತಿರೋದು. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅದೇನೋ ಮೇಕೆದಾಟು ಅಂತಾರೆ?: ಈಗ ನಟ್ಟು, ಬೋಲ್ಟು ಟೈಟ್ ಅಂತಾರೆ. ನಿಮಗೆ 136 ಸ್ಥಾನ ಜನ ಕೊಟ್ಟಿರೋದು ಏಕೆ? ಮೇಕೆದಾಟು ಮಾಡಿ. ನಿಮ್ಮ ಪಾರ್ಟ್‌ನರ್ ಪಾರ್ಟಿ ತಮಿಳುನಾಡಿನಲ್ಲಿ ಸರ್ಕಾರ ಮಾಡುತ್ತಿದೆ. ಮೊದಲು ಅಲ್ಲಿ ಅನುಮತಿ ತೆಗೆದುಕೊಂಡು ಬನ್ನಿ. 10 ನಿಮಿಷದಲ್ಲಿ ಪ್ರಧಾನಿಗಳ ಬಳಿ ನಾನು ಪರ್ಮಿಷನ್ ಕೊಡಿಸ್ತೀನಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
ಸಂಸದ ಡಾ. ಸಿ.ಎನ್.ಮಂಜುನಾಥ್ ಮಾತನಾಡಿ, ಪ್ರ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಯಲ್ಲಿ 7.5ಕೋಟಿ ರೈತರಿಗೆ ವರ್ಷಕ್ಕೆ ಆರು ಸಾವಿರ ರೂ. ನೀಡಲಾಗುತ್ತಿದೆ. ಜಿಲ್ಲೆಯಲ್ಲಿಯೂ ಕಳೆದ ಆರುವರ್ಷದಲ್ಲಿ 1 ಲಕ್ಷ ಕೋಟಿ ಕುಟುಂಬಕ್ಕೆ 356 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಬಮುಲ್ ನಿರ್ದೇಶಕ ಎಚ್.ಸಿ.ಜಯಮುತ್ತು ಮಾತನಾಡಿದರು.
ಕಾಂಗ್ರೆಸ್‌ನಿಂದ ಏನೂ ನಿರೀಕ್ಷಿಸಲು ಆಗಲ್ಲ
ಕಾಂಗ್ರೆಸ್ ಸರ್ಕಾರದಿಂದ ಏನನ್ನೂ ನಿರೀಕ್ಷೆ ಮಾಡಲು ಆಗಲ್ಲ. ಎಸ್ಸಿ-ಎಸ್ಟಿ ಹಣ ಏನು ಮಾಡುತ್ತಿದ್ದಾರೆ. ಜನರ ಪರಿಸ್ಥಿತಿ ಏನಾಗಿದೆ.? ಇದರ ಬಗ್ಗೆ ಚರ್ಚೆ ಮಾಡೋದು ಕೆಸರಿನ ಮೇಲೆ ಕಲ್ಲು ಹಾಕಿದ ಹಾಗೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಚನ್ನಪಟ್ಟಣದಲ್ಲಿ ರಾಜ್ಯ ಬಜೆಟ್ ಬಗ್ಗೆ ನಿರೀಕ್ಷೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಚನ್ನಪಟ್ಟಣಕ್ಕೇ ಕಳೆದ ನಾಲ್ಕು ತಿಂಗಳಿನಿಂದ ಏನು ಮಾಡಿಲ್ಲ. ಒಂದು ಕೆರೆಗೆ ನೀರು ತುಂಬಿಸಿದ್ದಾರಾ.? ಈ ಸರ್ಕಾರದ ಬಗ್ಗೆ ಚರ್ಚೆ ಮಾಡೋದರಲ್ಲಿ ಅರ್ಥವೇ ಇಲ್ಲ ಎಂದರು. ಚನ್ನಪಟ್ಟಣದ ಅಭಿವೃದ್ಧಿಗೆ ನನ್ನ ಆತ್ಮಸಾಕ್ಷಿ ಒಪ್ಪುವ ಹಾಗೆ ಕೆಲಸ ಮಾಡಿದ್ದೇನೆ. ಅವರನ್ನು ತೃಪ್ತಿಪಡಿಸಲು ಕೆಲಸ ಮಾಡೋಕಾಗುತ್ತಾ? ಏನು ಕೆಲಸ ಮಾಡಿದ್ದೇನೆ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ ಎಂದರು. ಸರ್ಕಾರದ ವೈಫಲ್ಯ ಎದುರಿಸುವಲ್ಲಿ ವಿರೋಧ ಪಕ್ಷಗಳು ವಿಫಲ ಎಂಬ ವಿಚಾರದ ಬಗ್ಗೆ ಮಾತನಾಡಿ, ಎಲ್ಲದರ ದರವೂ ಏರಿಕೆಯಾದರೂ ಜನ ಇದಕ್ಕೆ ತಲೆಕೆಡಿಸಿಕೊಳ್ಳುತ್ತಿಲ್ಲ. ಜನರಿಗೆ ಬೇಕಿಲ್ಲದಿದ್ದಾಗ ವಿರೋಧ ಪಕ್ಷಗಳು ಏನು ಚರ್ಚೆ ಮಾಡುತ್ತವೆ. ಗ್ಯಾರಂಟಿ ಕಾರ್ಯಕ್ರಮ ಅವರಿಗೆ ಸಂತೃಪ್ತಿ ತಂದಿದೆ ಎಂದು ಮಾರ್ಮಿಕವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಸಂಪದ್ಭರಿತ ರಾಜ್ಯ ಹಿಂದೆ ಉಳಿಯುವ ಆತಂಕಚನ್ನಪಟ್ಟಣ : ರಾಜ್ಯವನ್ನು ಯಾರು ಉಳಿಸುತ್ತಾರೆ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದರೆ, ಈ ಸಂಪದ್ಭರಿತ ರಾಜ್ಯ ಅಭಿವೃದ್ಧಿಯಲ್ಲಿ ಹಿಂದೆ ಉಳಿಯಲಿದೆ. ನಮ್ಮ ಜನ ಇನ್ನಾದರೂ ಬುದ್ಧಿವಂತರಾಗಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾರ್ಮಿಕವಾಗಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಅಕ್ಕೂರು ಗ್ರಾಮದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ನಾನು ಚರ್ಚಿಸಲ್ಲ. ಮತಕ್ಕೋಸ್ಕರ ಮೀಸಲಾತಿ ಚರ್ಚೆ ಮಾಡಿ ಏನು ಪ್ರಯೋಜನ? ಜನಕ್ಕೆ ಬೇಕಾಗಿರೋದು ರಾಜ್ಯದ ಅಭಿವೃದ್ಧಿ. ಮೊದಲು ಆ ಕೆಲಸ ಮಾಡಲಿ ಎಂದರು. ಏನೋ ಹೇಳಿದ್ದಾರಲ್ಲ, ಅವರಿಗೆ ಕೇಳುತ್ತೇನೆ.
ನಾನು ಸಿಎಂ ಆಗಿದ್ದಾಗ ಇಡೀ ರಾಜ್ಯದಲ್ಲಿ ಗುತ್ತಿಗೆದಾರರಿಗೆ ಪ್ರತಿ ತಿಂಗಳು ಹಣ ಬಿಡುಗಡೆ ಮಾಡುತ್ತಿದ್ದೆ. ಆಗ ಯಾವ ಗುತ್ತಿಗೆದಾರರು ಕಮಿಷನ್ ಕೊಟ್ಟಿದ್ದಾರೆ? ಎರಡು ಬಾರಿ ಸಿಎಂ ಆಗಿದ್ದಾಗಲೂ ಯಾವ ಇಲಾಖೆಗೆ ಕಮಿಷನ್ ಕೊಟ್ಟಿದ್ದೀರಿ? ಆಗ ಯಾಕೆ ಈ ಬಗ್ಗೆ ಚರ್ಚೆ ಮಾಡಲಿಲ್ಲ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಅವರ ಆರೋಪ ಕುರಿತು ಪ್ರತಿಕ್ರಿಯಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲೆ ಮರುನಾಮಕರಣಕ್ಕೆ ಕುಮಾರಸ್ವಾಮಿ ಅಡ್ಡಗಾಲು ಎಂಬ ಡಿಕೆಶಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಏಕೆ ಅಡ್ಡಗಾಲು ಹಾಕಲಿ. ಇರೋದರಲ್ಲೇ ಸರಿಯಾಗಿ ಕೆಲಸ ಮಾಡಲು ಯೋಗ್ಯತೆ ಇಲ್ಲ. ದಕ್ಷಿಣ ಜಿಲ್ಲೆ ಎಂಬ ಹೆಸರು ಇಟ್ಟು ಏನು ಅಭಿವೃದ್ಧಿ ಮಾಡುತ್ತೀರಿ. ಅದಕ್ಕೆ ನಾನ್ಯಾಕೆ ಅಡ್ಡಗಾಲು ಹಾಕಿ, ಲೆಟರ್ ಕೊಡಲಿ. ದಕ್ಷಿಣ ಜಿಲ್ಲೆ ಮಾಡೋದಕ್ಕೂ ಕೇಂದ್ರ ಸರ್ಕಾರಕ್ಕೂ ಏನು ಸಂಬಂಧ? ಹೆಸರು ಬದಲಾವಣೆ ಮಾಡೋದು ರಾಜ್ಯ ಸರ್ಕಾರ. ಇಂತಹ ಹೇಳಿಕೆಗೆ ಉತ್ತರ ಕೊಡಬೇಕಾ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಾರ್ಖಾನೆ ತರಲು ಇವರು ಪ್ರಪೋಸಲ್ ಕೊಡಬೇಕು. ನಾವೇ ಪ್ರಪೋಸಲ್ ತರಲು ಆಗಲ್ಲ. ಸಾಕಷ್ಟು ಕಾರ್ಖಾನೆಗಳು ಬೇರೆ ರಾಜ್ಯದ ಪಾಲಾಗುತ್ತಿವೆ. ಸರ್ಕಾರ ದಿನ ಬೆಳಗ್ಗೆಯಾದರೆ ನಮ್ಮ ಮೇಲೆ ಟೀಕೆ ಮಾಡಿಕೊಂಡು ಕೂತಿದೆ. ಈಗ ಮೆಟ್ರೋ ದರ ಏರಿಕೆ ಆಗಿದೆ. ಬಸ್ ಉಚಿತ ಅಂತಾರೆ. ಜನರ ತೆರಿಗೆ ದುಡ್ಡು ತೆಗೆದುಕೊಂಡು ಮತ್ತೆ ಅವರಿಗೆ ಕೊಡುವುದಾದರೆ ನಾನು ತಿಂಗಳಿಗೆ 10 ಸಾವಿರ ಹಣ ಕೊಡುತ್ತಿದೆ. - ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಕೃಷಿಗೆ ಉತ್ತಮ ಕೊಡುಗೆ ನೀಡಿದೆ. 2014 ರಲ್ಲಿ ದೇಶದ ಕೃಷಿ ಬಜೆಟ್ 22 ಸಾವಿರ ಕೋಟಿ ಇತ್ತು. ಈ ಬಾರಿ ಅದು 1.30 ಲಕ್ಷ ಕೋಟಿ ಆಗಿದೆ. ಕೃಷಿಗೆ ಕೇಂದ್ರ ಸಾಕಷ್ಟು ಆದ್ಯತೆ ನೀಡುತ್ತಿದೆ. -ಡಾ. ಸಿ.ಎನ್.ಮಂಜುನಾಥ್, ಸಂಸದ