ಪುನೀತ್​ ಬಗ್ಗೆ ಅಶ್ಲೀಲ ಪದ ಬಳಸಿ ಅವಮಾನ: ಸುದೀಪ್​ ಮಗಳು ಸಾನ್ವಿಯಿಂದ ಹಿಗ್ಗಾಮುಗ್ಗಾ ತರಾಟೆ

sanvi sudeep
Published on

ಬೆಂಗಳೂರು: ನಟ ಪುನೀತ್ ​ರಾಜ್​ಕುಮಾರ್ ಬಾರದೂರಿಗೆ ಹೋಗಿ 3 ದಿನ ಕಳೆದಿದ್ದರೂ ಕುಟುಂಬಸ್ಥರು ಮತ್ತು ಅಭಿಮಾನಿಗಳ ಮನದಲ್ಲಿನ ನೋವು ಕಿಂಚಿತ್ತೂ ಕರಗಿಲ್ಲ. ಅಪ್ಪು ಇನ್ನು ನೆನಪು ಮಾತ್ರ ಎಂಬ ಕಹಿಸತ್ಯ ಮನಸ್ಸನ್ನ ಹಿಂಡುತ್ತಲೇ ಇದೆ. ಇಂತಹ ನೋವಿನ ಸಂದರ್ಭದಲ್ಲೂ ಕಿಡಿಗೇಡಿಗಳು ಪುನೀತ್​ ಕುರಿತು ಅವಹೇಳನಕಾರಿ ಪೋಸ್ಟ್​ ಹಾಕಿ ಕೀಳು ಮನಸ್ಥಿತಿಯನ್ನ ಪ್ರದರ್ಶಿಸಿದ್ದಾರೆ. ಇಂಹತ ವಿಕೃತ ಮನಸ್ಸಿನ ಕಿಡಿಗೇಡಿಗಳಿಗೆ ನಟ ಕಿಚ್ಚ ಸುದೀಪ್​ ಅವರ ಪುತ್ರಿ ಸಾನ್ವಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಅ.29ರಂದು ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಅಪ್ಪು ಅವರ ಅಂತಿಮ ದರ್ಶನ ಪಡೆಯಲು ಲಕ್ಷಾಂತರ ಮಂದಿ ಕಂಠೀರವ ಸ್ಟೇಡಿಯಂನತ್ತ ಧಾವಿಸುತ್ತಲೇ ಇದ್ದರು. ಅಪ್ಪು ಅಗಲಿಕೆ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಂಗಳೂರಲ್ಲಿ ಭಾನುವಾರದವರೆಗೂ ಬಾರ್​ ಮತ್ತು ಪಬ್​ಗಳನ್ನ ಬಂದ್​ ಮಾಡುವಂತೆ ಆದೇಶ ಹೊರಡಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗೆ ಆಸ್ಪದ ಕೊಡಬೇಡಿ. ಪುನೀತ್​ ಅವರನ್ನ ಅತ್ಯಂತ ಗೌರವಯುತವಾಗಿ, ಶಾಂತಿಯುತವಾಗಿ ಕಳುಹಿಸಿ ಕೊಡಲು ಸಹಕರಿಸಿ. ಅಪ್ಪು ಅಗಲಿಕೆ ನೋವಿನಲ್ಲಿ ಅಭಿಮಾನಿಗಳು ತಾಳ್ಮೆ, ಸ್ಥಿಮಿತ ಕಳೆದುಕೊಳ್ಳಬಾರದು. ಕುಡಿದ ಅಮಲಿನಲ್ಲಿ ಕೆಲ ಅಭಿಮಾನಿಗಳು ಭಾವೋದ್ವೇಗಕ್ಕೆ ಒಳಗಾದರೆ ಕಷ್ಟ ಎಂದು ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಬಾರ್​ಗಳನ್ನ ಬಂದ್​ ಮಾಡಿಸಿತ್ತು.

ಈ ವೇಳೆ ಮದ್ಯಕ್ಕಾಗಿ ಪರದಾಡಿದ್ದ ಉತ್ತರ ಭಾರತ ಮೂಲದ ಕೆವರು ಕೀಳು ಮನಸ್ಥಿತಿ ಪ್ರದರ್ಶಿಸಿದ್ದಾರೆ. ಉತ್ತರ ಭಾರತದಿಂದ ಬಂದು ಬೆಂಗಳೂರಲ್ಲಿ ಉದ್ಯೋಗ ಮಾಡುತ್ತಿರುವ ಕೆಲವರು ಎಣ್ಣೆಗಾಗಿ ಅಲೆದಾಡಿದ್ದಾರೆ. ನಿಷೇಧದ ನಡುವೆ ಕೊನೆಗೂ ಬಿಯರ್​ ಸಿಕ್ಕಿದೆ. ಬಳಿಕ ಕಾರಿನಲ್ಲಿ ಬಿಯರ್​ ಬಾಟಲಿ ಹಿಡಿದು ಫೋಟೋ ಕ್ಲಿಕ್ಕಿಸಿ ಅದನ್ನ ಸೋಷಿಯಲ್​ ಮೀಡಿಯಾದಲ್ಲಿ ಅಪ್​ಲೋಡ್​ ಮಾಡಿದ್ದಾನೆ. ಅಷ್ಟೇ ಅಲ್ಲ ಫೋಟೋ ಜತೆಗೆ ಪುನಿತ್​ ರಾಜ್​ಕುಮಾರ್​ ಬಗ್ಗೆ ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆ. ''ರಾಜ್​ಕುಮಾರ್​ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಆತನನ್ನು ನೀವು ನೆನಪಿನಲ್ಲೇ ಇಟ್ಟುಕೊಳ್ಳಿ ಮರೆಯಬೇಡಿ. ನಾನು ಎಣ್ಣೆ ಕುಡಿದು ಬಳಿಕ ಆತನ ಸಮಾಧಿ ಮೇಲೆ ಮೂ** ಮಾಡುತ್ತೇವೆ'' ಎಂದು ಫೋಸ್ಟ್​ ಮಾಡಿದ್ದಾನೆ. ಇದನ್ನ ಕಂಡ ಸುದೀಪ್​ ಪುತ್ರಿ ಸಾನ್ವಿ, ಕಿಡಿಗೇಡಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

'ಜನರಿಗೆ ಮನುಷ್ಯತ್ವ ಇಲ್ಲವೇ? ಮದ್ಯಕ್ಕಾಗಿ ಪುನೀತ್​ ಬಗ್ಗೆ ಇಂಥ ಮನಸ್ಥಿತಿಯೇ?' ಎಂದು ಪ್ರಶ್ನಿಸಿರುವ ಸಾನ್ವಿ, 'ಕರ್ನಾಟಕ ಸರ್ಕಾರ ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಂಡಿತ್ತು. ಬೆಂಗಳೂರಲ್ಲಿ ವಾಸವಿರುವ ಉತ್ತರ ಭಾರತದವರು ಸ್ವಲ್ಪವಾದರೂ ಪ್ರಜ್ಞಾವಂತಿಕೆ ತೋರಿ' ಎಂದು ಛಾಟಿ ಬೀಸಿದ್ದಾರೆ.

ಪುನೀತ್​ ಬಗ್ಗೆ ಅವಹೇಳನಕಾರಿ ಪೋಸ್ಟ್​ ಮಾಡಿದ ಕಿಡಿಗೇಡಿಗಳನ್ನ ಪತ್ತೆ ಹಚ್ಚಿ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕನ್ನಡಿಗರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net