

ಮಂಡ್ಯ: ನಟ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ಇಂದಿಗೆ 11 ದಿನ. ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ಬಳಿ ಪುನೀತ್ ಕುಟುಂಬಸ್ಥರು ಶಾಸ್ತ್ರೋಕ್ತವಾಗಿ 11ನೇ ದಿನ ಕಾರ್ಯ ನೆರವೇರಿಸಿದರು. ಸದಾಶಿವ ನಗರದಲ್ಲಿರುವ ಪುನೀತ್ ನಿವಾಸದಲ್ಲೂ ಅಪ್ಪು ಭಾವಚಿತ್ರಕ್ಕೆ ಪೂಜೆ ಮಾಡಿ ಅವರ ಇಷ್ಟವಾದ ತಿಂಡಿ ಇಟ್ಟು ಪೂಜೆ ಮಾಡಲಾಗಿದೆ. ಅತ್ತ ಕಾವೇರಿ ನದಿ ತಡದಲ್ಲಿ ವಿನೋದ್ ರಾಜ್ ಅವರಿಂದ ಪಿಂಡ ಪ್ರದಾನ ಕಾರ್ಯ ನಡೆದಿದೆ.
ಪುನೀತ್ರ 11ನೇ ದಿನದ ಪುಣ್ಯಸ್ಮರಣೆ ಹಿನ್ನೆಲೆ ತಾಯಿ ಲೀಲಾವತಿ ಜತೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಸಂಗಮಕ್ಕೆ ಬಂದ ವಿನೋದ್ರಾಜ್ ಅವರು ಪಿಂಡ ಪ್ರದಾನ ಮಾಡಿದರು. ಆಶ್ಲೇಷ ಬಲಿ ಹಾಗೂ ನಾರಾಯಣ ಬಲಿ ಪೂಜೆ ನೇವೇರಿಸಿ ಕಾವೇರಿ ನದಿಯಲ್ಲಿ ತರ್ಪಣ ಬಿಟ್ಟು ಪುನೀತ್ ಆತ್ಮಕ್ಕೆ ಶಾಂತಿ ಕೋರಿದರು. ಸ್ಥಳೀಯ ವೈದಿಕರ ನೇತೃತ್ವದಲ್ಲಿ ಪುನೀತ್ ವೈದಿಕ ಕ್ರಿಯಾ ಅಪರ ಕರ್ಮದ ಕಾರ್ಯವನ್ನ ವಿನೋದ್ ರಾಜ್ ನೆರವೇರಿಸಿದರು.