ಅಪಘಾತದಲ್ಲಿ ಅಪ್ಪು ಅಭಿಮಾನಿ ಸಾವು: ಕೊನೇ ಕ್ಷಣದಲ್ಲಿ ಪತ್ನಿಗೆ ಆತ ಹೇಳಿದ ಕೊನೇ ಮಾತು ಕೇಳಿದ್ರೆ ಮನಕಲಕುತ್ತೆ

New Project (2)
Published on

ಕುಣಿಗಲ್​: ಆಟೋಗೆ ಜೀಪ್​ ಡಿಕ್ಕಿಯಾಗಿ ಪುನೀತ್​ರಾಜಕುಮಾರ್​ ಅಭಿಮಾನಿಯೊಬ್ಬ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಬಿ.ಎಂ.ರಸ್ತೆ ಹನುಮಾಪುರ ಸಮೀಪ ಸೋಮವಾರ ಸಂಜೆ ನಡೆದಿದೆ.

ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಕಂಠನಪಾಳ್ಯದ ಕಾಂತರಾಜು(37) ಮೃತ. ಬೆಂಗಳೂರು ಸುಂಕದಕಟ್ಟೆಯಲ್ಲಿ ವಾಸವಿದ್ದ ಕಾಂತರಾಜು, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಭಾನುವಾರ ಬೆಂಗಳೂರಿನಿಂದ ಕುಣಿಗಲ್​ ತಾಲೂಕಿನ ಯಾಚಘಟ್ಟದ ಸಂಬಂಧಿಕರ ಮದುವೆಗೆ ಆಟೋದಲ್ಲಿ ಬಂದಿದ್ದರು. ಸೋಮವಾರ ಬೆಂಗಳೂರಿಗೆ ಹಿಂದಿರುಗುವಾಗ ಹಾಸನ ಕಡೆಯಿಂದ ಬಂದ ಜೀಪ್​ ಡಿಕ್ಕಿ ಹೊಡೆದು ಆಟೋ ಪಲ್ಟಿಯಾಗಿದೆ. ತೀವ್ರ ಗಾಯಗೊಂಡಿದ್ದ ಅವರನ್ನು ಕುಣಿಗಲ್​ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸಾವಿಗೂ ಮುನ್ನ ಅಂದರೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಆ ಕ್ಷಣದಲ್ಲಿ ಕಾಂತರಾಜು, ಪತ್ನಿಗೆ ಹೇಳಿದ ಮಾತು ಅಪ್ಪು ಅಭಿಮಾನಿಗಳ ಮನಸ್ಸನ್ನ ಕಲಕುವಂತೆ ಮಾಡಿದೆ.

ಗಾಯಗೊಂಡು ನರಳಾಡುತ್ತಿದ್ದ ಕಾಂತರಾಜು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ, 'ನಾನು ಅಪ್ಪು ಅಭಿಮಾನಿ. ನಾನು ಮೃತಪಟ್ಟರೆ ನನ್ನ ಕಣ್ಣುಗಳನ್ನು ದಾನ ಮಾಡಿಬಿಡು...' ಎಂದು ತನ್ನ ಪತ್ನಿಗೆ ಹೇಳಿದ್ದರು. ಇದಾದ ಕೆಲವೇ ಕ್ಷಣದಲ್ಲಿ ಕಾಂತರಾಜು ಕೊನೆಯುಸಿರೆಳೆದರು. ನೋವಿನಲ್ಲೂ ಗಂಡನ ಕೊನೇ ಆಸೆಯಂತೆ ಕಾಂತರಾಜು ಅವರ ಪತ್ನಿ ಕುಣಿಗಲ್​ ಪಟ್ಟಣದ ಎಂ.ಎಂ ಆಸ್ಪತ್ರೆಯಲ್ಲಿ ನೇತ್ರದಾನ ಮಾಡಿದರು. ವೈದ್ಯ ಡಾ.ಎಂ.ಆರ್​.ರವಿಕುಮಾರ್ ಅವರು ಕಾಂತರಾಜು ಅವರ​ ಕಣ್ಣುಗಳನ್ನು ಪಡೆದರು. ಅಪಘಾತದಲ್ಲಿ ಕಾಂತರಾಜು ಅವರ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net