PSI ಹುದ್ದೆ ಅಕ್ರಮದಲ್ಲಿ ವಿಜಯೇಂದ್ರ... ಇವರ ಹೆಸರು ಬರೆದುಕೊಳ್ಳಿ ಮಾಹಿತಿ ಕೊಡ್ತೀವಿ: ಸಿದ್ದರಾಮಯ್ಯ

vijayendra
Published on

ಬೆಂಗಳೂರು: ಪಿಎಸ್​ಐ ಹುದ್ದೆ ನೇಮಕಾತಿ ಹಗರಣ ಪ್ರಕರಣದಲ್ಲಿ ಐಪಿಎಸ್​ ಅಧಿಕಾರಿ ಅಮೃತ್​ ಪೌಲ್​ ಅವರನ್ನ ಸಿಐಡಿ ಬಂಧಿಸಿದ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ಕೊಟ್ಟಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲ ಮೂಡಿದೆ.

ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ಜಂಟಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಅಮೃತ್​ ಪೌಲ್​ರ ಬಂಧನ ಕೇವಲ ಕಣ್ಣೊರೆಸುವ ತಂತ್ರ. ಈ ಪ್ರಕರಣದಲ್ಲಿ ಸಚಿವರ ಪಾತ್ರ ಇದೆ, ದೊಡ್ಡವರ ಪಾತ್ರ ಇದೆ. ಎಲ್ಲವೂ ಬಹಿರಂಗವಾಗಲಿ. ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು. ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ, ಪಿಎಸ್​ಐ ಹುದ್ದೆ ನೇಮಕಾತಿ ಅಕ್ರಮದಲ್ಲಿ ಹಾಲಿ ಸಿಎಂ ಮತ್ತು ಮಾಜಿ ಸಿಎಂ ಇದ್ದಾರೆ. ಬಿ.ವೈ.ವಿಜಯೇಂದ್ರ ಕೂಡ ಇದ್ದಾರೆ. ವಿಜಯೇಂದ್ರ ಅವರ ಹೆಸರನ್ನು ಬರೆದುಕೊಳ್ಳಿ. ಇವರ ಬಗ್ಗೆ ಮಾಹಿತಿ ಏನಿದೆ? ಎಂದು ಈಗ ಬಹಿರಂಗ ಪಡಿಸಲ್ಲ. ಎಲ್ಲಿ ಕೊಡಬೇಕೋ ಅಲ್ಲಿ‌ಯೇ ಕೊಡುತ್ತೇವೆ ಎಂದು ಕುತೂಹಲ ಮೂಡಿಸಿದ್ದಾರೆ.

ಎಸಿಬಿ ಇರುವುದು ಭ್ರಷ್ಟಾಚಾರ ಕಡಿಮೆ ಮಾಡಲಿ, ಭ್ರಷ್ಟರನ್ನು ಶಿಕ್ಷಿಸಲಿ, ಸಮಾಜದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ಮತ್ತು ಸೇವೆ ಸಿಗುವಂತೆ ಮಾಡಲೆಂದು. ಆದರೆ ಕುರಿಯನ್ನು ಕಾಯಿ ಎಂದರೆ ಸಂಬಳವೇ ಬೇಡ ಎಂದು ಹೇಳಿತಂತೆ ತೋಳ. ಹಾಗಾಗಿದೆ ಈಗಿನ ಸ್ಥಿತಿ. ಪಿಎಸ್​ಐ ಹುದ್ದೆ ಅಕ್ರಮದಲ್ಲಿ ವಿಜಯೇಂದ್ರ ಅವರ ಮೇಲೂ ಆರೋಪ ಇದೆ. ಅಶ್ವತ್ಥನಾರಾಯಣ್​ ಮೇಲೂ ಆರೋಪ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೊದಲು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net