PSI ಹುದ್ದೆ ನೇಮಕಾತಿಯಲ್ಲಿ ಅಕ್ರಮ: ಸಿಐಡಿ ವಶಕ್ಕೆ ಗಣಪತಿ ಭಟ್​! ಗೃಹ ಸಚಿವರು ಹೇಳಿದ್ದೇನು?

psi exam scam
Published on

ಬೆಂಗಳೂರು: ಪಿಎಸ್​ಐ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ಪ್ರಕರಣ ದಿನ ದಿನಕ್ಕೂ ಸ್ಫೋಟಕ ತಿರುವು ಪಡೆಯುತ್ತಿದ್ದು, ಇದೀಗ ಸಿಐಡಿ ಅಧಿಕಾರಿಗಳು ಶಿರಸಿ ಮೂಲದ 62 ವರ್ಷದ ಗಣಪತಿ ಭಟ್​ ಎಂಬುವರನ್ನ ವಶಕ್ಕೆ ಪಡೆದಿದ್ದಾರೆ.

ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಅಧಿಕಾರಿಗಳು ನೋಟಿಸ್​ ಜಾರಿ ಮಾಡಿದ್ದರು. ಈ ಹಿನ್ನೆಲೆ ಹಾಜರಾದ ಗಣಪತಿ ಭಟ್, ವಿಚಾರಣೆ ಎದುರಿಸುತ್ತಿದ್ದಾರೆ. ಅತ್ತ ಈ ಗಣಪತಿ ಭಟ್​ರನ್ನು ಗೃಹ ಸಚಿವ ಆರಗ ಜ್ಞಾನೇಂದ್ರರ ಆಪ್ತ ಸಹಾಯಕ ಎಂಬ ಗುಸುಗುಸು ವ್ಯಾಪಕವಾಗಿ ಹರಡಿತ್ತು. ಪಿಎಸ್​ಐ ಹುದ್ದೆ ಹಗರಣದಲ್ಲಿ ಗೃಹ ಸಚಿವರ ಆಪ್ತ ಸಹಾಯಕನ ಕೈವಾಡವಿದೆ, ಗೃಹ ಸಚಿವರಿಗೂ ಸಂಕಷ್ಟ ಎದುರಾಗಬಹುದು ಎಂಬ ಬಿಸಿಬಿಸಿ ಚರ್ಚೆ ಸಾರ್ವಜನಿಕ ವಲಯದಲ್ಲಿ ಶುರುವಾಗಿತ್ತು.

ಅಷ್ಟರಲ್ಲಿ ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದ ಗೃಹಸಚಿವರು, ಗಣಪತಿ ಭಟ್ ಎನ್ನುವ ಹೆಸರಿನಲ್ಲಿ ನಮ್ಮ ಒಎಸ್​ಡಿ ಇದ್ದಾರೆ. ಇಂದು ಸಿಐಡಿ ವಶಕ್ಕೆ ಪಡೆದಿರುವ ವ್ಯಕ್ತಿ ನಮ್ಮ ಕಾರ್ಯಾಲಯದ ಸಿಬ್ಬಂದಿಯಲ್ಲ. ಈ ಬಗ್ಗೆ ಗೊಂದಲ ಬೇಡ ಎಂದಿದ್ದಾರೆ. ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿರುವ ಶಿರಸಿ ಮೂಲದ ಗಣಪತಿ ಭಟ್​ಗೆ ಪಿಎಸ್​ಐ ಹಗರಣದ ಲಿಂಕ್ ಇದೆ ಎಂಬ ಮಾಹಿತಿ ಸಿಕ್ಕಿದೆ. ಅವರು ಸಾಕಷ್ಟು ವರ್ಗಾವಣೆಯಲ್ಲಿ ತೊಡಗಿದ್ದರು. ಅದನ್ನೇ ವೃತ್ತಿ, ಪ್ರವೃತ್ತಿಯನ್ನಾಗಿಸಿಕೊಂಡಿದ್ದರು. ಹೀಗಾಗಿ ವಿಚಾರಣೆ ನಡೆಸುತ್ತಿದ್ದಾರೆ. ಈ ಅಕ್ರಮದಲ್ಲಿ ಯಾರೇ ಇದ್ದರೂ ಅವರನ್ನ ಬಿಡೋದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net