ಅರ್ಧಕ್ಕೆ ನಿಂತ ಕಾಮಗಾರಿಯಿಂದ ಸಮಸ್ಯೆ

ಅರ್ಧಕ್ಕೆ ನಿಂತ ಕಾಮಗಾರಿಯಿಂದ ಸಮಸ್ಯೆ
Published on

ಸರಗೂರು: ನೀರಿನ ಟ್ಯಾಂಕ್ ಮತ್ತು ಪೈಪ್‌ಲೈನ್ ಕಾಮಗಾರಿ ಮಾಡಲು ಗುತ್ತಿಗೆ ಪಡೆದ ಗುತ್ತಿಗೆದಾರ ಅರ್ಧಕ್ಕೆ ಕೆಲಸ ನಿಲ್ಲಿಸಿ ಹೋಗಿರುವ ಪರಿಣಾಮ ರಸ್ತೆಗಳು ದುಸ್ಥಿತಿ ತಲುಪಿದ್ದು, ವಾಹನ ಚಾಲಕರು ಪ್ರಯಾಸಪಡುವಂತಾಗಿದೆ.

ತಾಲೂಕಿನ ಎಂ.ಸಿ. ತಳಲು ಗ್ರಾಮದಿಂದ ಯಶವಂತಪುರದವರೆಗೆ ದಿ. ಆರ್.ಧ್ರುವನಾರಾಯಣ್ ಸಂಸದರಾಗಿದ್ದಾಗ, ಶಾಸಕ ಅನಿಲ್ ಚಿಕ್ಕಮಾದು ನೇತೃತ್ವದಲ್ಲಿ ಸುತ್ತಮುತ್ತಲ ಗ್ರಾಮದ ಎಂ.ಸಿ. ತಳಲು ಕೆರೆ, ಎತ್ತಿಗೆ ಕೆರೆ, ಎಸ್.ಎಂ.ಪುರ ಕೆರೆ ಸೇರಿದಂತೆ ಇತರ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲು ಸಣ್ಣ ಏತ ನೀರಾವರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗಿತ್ತು. ಈ ಸಲುವಾಗಿ ರಸ್ತೆ ಬದಿ ಪೈಪ್‌ಲೈನ್ ಅಳವಡಿಸಲು ಗುಂಡಿಗಳನ್ನು ಮಾಡಿ ಅರ್ಧಕ್ಕೆ ಕಾಮಗಾರಿ ಕೈಬಿಟ್ಟಿರುವುದರಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗಿದೆ.

13 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲು ತೀರ್ಮಾನಿಸಲಾಗಿದ್ದು, ನುಗು ಹಿನ್ನೀರಿನ ಬಳಿ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಪೈಪ್‌ಲೈನ್ ಮಾಡಲು ಹಳ್ಳ ತೆಗೆಯಲಾಗಿದೆ. ಇದನ್ನು ಸರಿಪಡಿಸದ ಕಾರಣ ವಾಹನ ಸವಾರಿಗೆ ಓಡಾಡಲು ಕಷ್ಟಸಾಧ್ಯವಾಗಿದೆ. ಅಪಘಾತ ಪ್ರಕರಣಗಳು ಕೂಡ ಹೆಚ್ಚು ಸಂಭವಿಸುತ್ತಿವೆ. ಗುತ್ತಿಗೆದಾರರಿಗೆ ಈ ಬಗ್ಗೆ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. 2018ರಲ್ಲಿ ಪ್ರಾರಂಭವಾದ ಕಾಮಗಾರಿ ಈವರೆಗೂ ಮುಗಿಯದಿರುವುದು ಸಮಸ್ಯೆಗೆ ಕಾರಣವಾಗಿದೆ.

ಈ ಬಗ್ಗೆ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಶಾಸಕರ ಗಮನಕ್ಕೆ ಹಲವು ಬಾರಿ ತರಲಾದರೂ ಪ್ರಯೋಜನವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net