

* 2013ರಲ್ಲಿ ಆರಂಭಗೊಂಡ ಕಾಮಗಾರಿ ಸ್ಥಗಿತ
* ಹಣ ನೀಡದ್ದಕ್ಕೆ ಕೋರ್ಟ್ ಮೊರೆ ಹೋಗಿದ್ದಗುತ್ತಿಗೆ ಸಂಸ್ಥೆ
* ಭರವಸೆ ಮೂಡಿಸಿದ ಬೆಂಗಳೂರು ಸಭೆ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ನಗರದ ಹೈಟೆಕ್ ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ಈಗಲಾದರೂ ಆರಂಭಗೊಳ್ಳುವುದೇ? ಈ ಕಾಮಗಾರಿ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಶಾಸಕ ಸಿ. ಪಿ. ಯೋಗೇಶ್ವರ್ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆದಿರುವುದು ಇಂತಹದ್ದೊಂದು ಆಶಾಭಾವನೆ ಮೂಡಿಸಿದೆ.
ಹೌದು..! ನಗರದಲ್ಲಿ ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ಸಮಸ್ಯೆ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಶಾಸಕ ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆದಿದ್ದು, ವಿಸ್ತೃತ ಚರ್ಚೆ ನಡೆದಿದೆ ಎಂಬ ಮಾಹಿತಿ ಇದೆ.
ಕಾಮಗಾರಿ ನನೆಗುದಿಗೆ ಬೀಳಲು ಪ್ರಮುಖವಾದ ವಿಚಾರಗಳ ಬಗ್ಗೆ ಚರ್ಚಿಸಿರುವ ಡಿಸಿಎಂ, ಕಾಮಗಾರಿ ಆರಂಭಗೊಳ್ಳಲು ತುರ್ತಾಗಿ ಆಗಬೇಕಿರುವ ಕ್ರಮಗಳ ಬಗ್ಗೆ ಶಾಸಕ ಸಿಪಿವೈ ಹಾಗೂ ಅಧಿಕಾರಿಗಳ ಜತೆ ಚರ್ಚಿಸಿದ್ದಾರೆ. ಸಭೆಯಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕೌಶಲ ಅಭಿವೃದ್ಧಿ ಸಚಿವ ಶರಣ ಪ್ರಕಾಶ್ ಪಾಟೀಲ್, ರಾಮನಗರ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಆಯುಕ್ತ ಶಿವಶಂಕರೆಗೌಡ, ಚನ್ನಪಟ್ಟಣ ನಗರಸಭೆ ಪೌರಾಯುಕ್ತ ಮಹೇಂದ್ರ ಸೇರಿ ಹಲವರು ಭಾಗಿಯಾಗಿದ್ದರು.
ನಗರದ ಬೆಂಗಳೂರು-ಮೈಸೂರು ಹೆದ್ದಾರಿ ಬದಿಯಲ್ಲಿ ಹೈಟೆಕ್ ಖಾಸಗಿ ಬಸ್ ಟರ್ಮಿನಲ್ ನಿರ್ಮಿಸಲು ರಾಮನಗರ-ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರಸಭೆ ಜಂಟಿಯಾಗಿ ಯೋಜನೆ ರೂಪಿಸಿದ್ದವು. 2013ರಲ್ಲಿ ಈ ಕಾಮಗಾರಿಗೆ ಚಾಲನೆನೀಡಲಾಯಿತು. ಪ್ರಾಧಿಕಾರದ ಹಣದಲ್ಲಿ ಸುಮಾರು 35 ಕೋಟಿ ರೂ. ಅಂದಾಜು ವೆಚ್ಚದಲ್ಲಿ 7 ಅಂತಸ್ತಿನ ಹಡಗು ಮಾದರಿಯ ಬಸ್ ನಿಲ್ದಾಣ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಆದರೆ, ಕಾಮಗಾರಿಗಾಗಿ ಹಳ್ಳ ತೋಡಿದ್ದು ಹೊರತುಪಡಿಸಿ, ಅನುದಾನದ ಕೊರತೆ, ಕಾನೂನು ವ್ಯಾಜ್ಯ, ಪ್ರಾಧಿಕಾರದ ಬಹುಕೋಟಿ ಹಗರಣ ಸೇರಿ ಹಲವು ಕಾರಣದಿಂದ ಯೋಜನೆಯೇ ಸಂಪೂರ್ಣ ಹಳ್ಳ ಹಿಡಿದಿದೆ.
ಬರೋಬ್ಬರಿ 12 ವರ್ಷಗಳಿಂದ ಈ ಕಾಮಗಾರಿ ನನೆಗುದಿಗೆ ಬಿದ್ದಿದೆ. ಗುತ್ತಿಗೆ ಪಡೆದ ಕಂಪನಿ ಬೃಹತ್ ಕಟ್ಟಡ ಕಾಮಗಾರಿ ಆರಂಭದಲ್ಲಿ ಉತ್ಸಾಹದಲ್ಲೇ ಶುರು ಮಾಡಿತ್ತು. ಅಡಿಪಾಯಕ್ಕಾಗಿ ಮಣ್ಣು ಎತ್ತಿದ್ದು ಬಿಟ್ಟರೆ ಗ್ರಹಣ ಹಿಡಿದಂತಾಗಿ ಅಷ್ಟಕ್ಕೆ ನಿಂತಿತು.ಕಾಮಗಾರಿ ಆರಂಭದ ಹಣ ಪ್ರಾಧಿಕಾರದಿಂದ ಬರದ ಕಾರಣ ಹಣ ಕೊಡಿಸುವಂತೆ ಗುತ್ತಿಗೆ ಸಂಸ್ಥೆ ನ್ಯಾಯಾಲಯದ ಮೊರೆ ಹೋಗಿತ್ತು. ಅದರಂತೆ 2022ರ ಆಗಸ್ಟ್‌ನಲ್ಲಿಗುತ್ತಿಗೆ ಸಂಸ್ಥೆಗೆ 4.74 ಕೋಟಿ ಭರಿಸುವಂತೆ ನ್ಯಾಯಾಲಯ ಪ್ರಾಧಿಕಾರಕ್ಕೆ ಆದೇಶ ನೀಡಿತು. ಆದರೆ, ಇದುವರೆಗೂ ಹಣ ಭರಿಸಲು ಪ್ರಾಧಿಕಾರಕ್ಕೆ ಸಾಧ್ಯವಾಗಿಲ್ಲ.
ಗುತ್ತಿಗೆದಾರರಿಗೆ ಪರಿಹಾರ ಕೊಟ್ಟು ಖಾಸಗಿ ಬಸ್ ನಿಲ್ದಾಣದ ಜಾಗವನ್ನು ಗುತ್ತಿಗೆದಾರರಿಂದ ಬಿಡಿಸಿಕೊಂಡು ನಗರಸಭೆಗೆ ಹಸ್ತಾಂತರ ಮಾಡಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರ ಜತೆ ಚರ್ಚೆ ಮಾಡಲು ಸರ್ಕಾರದ ಹಂತದಲ್ಲೇ ಮಹತ್ವದ ಸಭೆ ಆಯೋಜಿಸುವಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಯಶಸ್ವಿಯಾಗಿದ್ದು, ಇದಕ್ಕೆ ಡಿಸಿಎಂ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ. ಗುತ್ತಿಗೆದಾರ ಸಂಸ್ಥೆಯ ಬಿಲ್ ಬಾಕಿ ಸೇರಿ ಮುಂದಿನ ಕ್ರಮಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆದಿರುವುದು ಖಾಸಗಿ ಬಸ್ ನಿಲ್ದಾಣದ ಕನಸಿಗೆ ಮತ್ತೆ ಜೀವನ ಬಂದಂತಾಗಿದೆ.
ನಗರದ ಹೃದಯಭಾಗದ ಜಾಗದಲ್ಲಿ ಸುಸಜ್ಜಿತ ಖಾಸಗಿ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು ಎಂಬ ಆಶಯವಿತ್ತು. ಆದರೆ, ನಾನಾ ಕಾರಣಗಳಿಂದ ಈ ಉದ್ದೇಶಿತ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಇದೀಗ, ಕಾಮಗಾರಿಗೆ ಸಂಬಂಧಿಸಿದಂತೆ ಆಗಬೇಕಿರುವ ಕೆಲಸಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಸಭೆ ನಡೆಸಲಾಗಿದೆ. ಡಿಸಿಎಂ ಸಹ ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ.ಸಿ.ಪಿ.ಯೋಗೇಶ್ವರ್ಶಾಸಕ, ಚನ್ನಪಟ್ಟಣಶಾಸಕ ಸಿ.ಪಿ.ಯೋಗೇಶ್ವರ್ ವಿಧಾನಸೌಧದಲ್ಲಿ ಭೇಟಿ ಮಾಡಿ, ಚನ್ನಪಟ್ಟಣದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿದರು. ಚನ್ನಪಟ್ಟಣ ಕ್ಷೇತ್ರದ ಪ್ರಗತಿಗೆ ಸರ್ಕಾರ ಈಗಾಗಲೇ ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದ್ದು, ಚನ್ನಪಟ್ಟಣ ಜನರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ.ಡಿ.ಕೆ.ಶಿವಕುಮಾರ್ಉಪಮುಖ್ಯಮಂತ್ರಿ