ಸಿದ್ದರಾಮಯ್ಯ ಮಾಂಸ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದು ತಪ್ಪಲ್ಲ, ಇದು ಚರ್ಚೆಯ ವಿಷಯವೇ ಅಲ್ಲ: ಪ್ರಮೋದ್​ ಮುತಾಲಿಕ್​

pramod
Published on

ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದು ತಪ್ಪಲ್ಲ. ಇದು ಚರ್ಚೆಯ ವಿಷಯವೇ ಅಲ್ಲ ಎಂದು ಬಿಜೆಪಿ ವಿರುದ್ಧ ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್​ ಮುತಾಲಿಕ್​ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಮಾಂಸ ತಿಂದು ಅಂಬಾರಿ ಮೇಲಿದ್ದ ಶ್ರೀಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ದಸರಾ ಜಂಬೂಸವಾರಿಗೆ ಚಾಲನೆ ನೀಡಿದ್ದರು. ಇದಕ್ಕೆ ನಾನೇ ಸಾಕ್ಷಿ ಎಂದು ಸಂಸದ ಪ್ರತಾಪ್​ ಸಿಂಹ ಆರೋಪಿಸಿದ್ದರು. ಇದರ ಬೆನ್ನಲ್ಲೇ ಈ ಹಿಂದೆ ಮೀನು ತಿಂದು ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಹೋಗಿದ್ದ ವಿಚಾರವೂ ಎದುರಳಿಗಳ ಬಾಯಿಗೆ ಆಹಾರವಾಗಿದೆ. ಪರ-ವಿರೋಧ ಚರ್ಚೆಗಳು ಶುರುವಾಗಿದ್ದು, ಈ ಕುರಿತು ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರಗೆ ಪ್ರತಿಕ್ರಿಯಿಸಿದ ಪ್ರಮೋದ್​ ಮುತಾಲಿಕ್​, ಬಿಜೆಪಿಯವರಿಗೆ ಚರ್ಚೆಗೆ ಬೇರೆ ವಿಷಯ ಇಲ್ಲವೇ ಎಂದು

ಕಿಡಿ ಕಾರಿದ್ದಾರೆ.

ಬಿಜೆಪಿಯವರು ಮಾಂಸಾಹಾರ ವಿಷಯ ಬಿಟ್ಟು ಸಾವರ್ಕರ್​ ಬಗ್ಗೆ ಚರ್ಚೆ ಮಾಡಲಿ. ಹಿಂದೂಗಳಲ್ಲಿಯೂ ಸಾಕಷ್ಟು ಜನ ಮಾಂಸಾಹಾರಿಗಳಿದ್ದಾರೆ. ಕೆಲವೆಡೆ ಹಿಂದು ದೇವರುಗಳಿಗೆ ಮಾಂಸಾಹಾರವನ್ನು ಪ್ರಸಾದವನ್ನಾಗಿ ಮಾಡುತ್ತಾರೆ. ಅದರಲ್ಲೇನು ತಪ್ಪಿದೆ? ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದು ತಪ್ಪಲ್ಲ. ಇದು ಚರ್ಚೆಯ ವಿಷಯವೇ ಅಲ್ಲ ಎಂದು ಪ್ರಮೋದ್​ ಮುತಾಲಿಕ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net