

ಕೋಲಾರ: ಜೂಜು ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು ಕೋಲಾರದ ಸೈಬರ್ ಕ್ರೈಂ ಇನ್ಸ್ಪೆಕ್ಟರ್, ಕೆಎಎಸ್ ಅಧಿಕಾರಿ, ಉಪನ್ಯಾಸಕ ಸೇರಿ ಹಲವರನ್ನು ಬಂಧಿಸಿದ್ದಾರೆ.
ಕೋಲಾರದ ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಆಗಿರುವ ಆಂಜಿನಪ್ಪ, 3 ದಿನ ರಜೆ ಮೇರೆಗೆ ರಾಜಸ್ತಾನಕ್ಕೆ ತೆರಳಿದ್ದರು. ಜೈಪುರದ ಸಾಯಿಪುರ ಬಾಗ್ ಹೋಟೆಲ್ ಜೂಜಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜೈಸಿಂಗೇಪುರ ಖೋರ್ ಠಾಣೆಯ ಪೊಲೀಸರು ದಾಳಿ ಮಾಡಿ 84 ಮಂದಿಯನ್ನು ಭಾನುವಾರ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. 9 ಹುಕ್ಕಾ, 14 ಐಷಾರಾಮಿ ಕಾರು, 1 ಟ್ರಕ್, 23 ಲಕ್ಷಕ್ಕೂ ಅಧಿಕ ಹಣ ಜಪ್ತಿ ಮಾಡಿದ್ದಾರೆ.
ಬಂಧಿತರ ಪೈಕಿ ಕೋಲಾರದ ಇನ್ಸ್ಪೆಕ್ಟರ್ ಆಂಜಿನಪ್ಪ, ತಹಸೀಲ್ದಾರ್ ಮಂಜುನಾಥ್, ಉಪನ್ಯಾಸಕ ರಮೇಶ್, ಆರ್ಟಿಒ ಸಿಬ್ಬಂದಿ ಶಬರೀಶ್, ನಗರಸಭೆ ನಾಮನಿರ್ದೇಶಿತ ಸದಸ್ಯ ಸತೀಶ್, ಟೊಮ್ಯಾಟೊ ವ್ಯಾಪಾರಿ ಸುಧಾಕರ್ ಇದ್ದಾರೆ. ಕರ್ನಾಟಕ ಮಾತ್ರವಲ್ಲ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳ ಅಧಿಕಾರಿಗಳೂ ಸಿಕ್ಕಿಬಿದ್ದಿದ್ದಾರೆ.