ಆರೋಗ್ಯಕ್ಕೆ ಎರವಾದ ಪವರ್ ಪ್ಲಾಂಟ್

16-09-rama-power1
Published on

* ಕಸದಿಂದ ವಿದ್ಯುತ್ ಉತ್ಪಾದನಾ ಘಟಕದಿಂದ ತೊಂದರೆ

* ಎಲ್ಲವೂ ಸರಿ ಇದೆ ಎನ್ನುವ ಅಧಿಕಾರಿಗಳು

ಗಂಗಾಧರ ಬೈರಾಪಟ್ಟಣ ರಾಮನಗರ

ಕಸದಿಂದ ವಿದ್ಯುತ್ ಉತ್ಪಾದಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿರುವುದಾಗಿ ಹೇಳುವ ಕೆಪಿಸಿ ಅನಿಲ ನಿಗಮ ನಿಯಮಿತ ಒಂದಿಲ್ಲೊಂದು ಯಡವಟ್ಟು ಮಾಡುತ್ತಲೇ ಇದ್ದು, ಹೊಗೆ ಮತ್ತು ಕೆಟ್ಟ ವಾಸನೆ ಇಲ್ಲಿನ ಅಕ್ಕಪಕ್ಕದ ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

ಬಿಡದಿ ಕೈಗಾರಿಕಾ ಪ್ರದೇಶದ ಬಿಲ್ಲಕೆಂಪನಹಳ್ಳಿ ಬಳಿ ಕೆಪಿಸಿಎಲ್‌ನ ಅಂಗ ಸಂಸ್ಥೆಯಾದ ಕೆಪಿಸಿ ಅನಿಲ ನಿಗಮ ನಿಯಮಿತ ತ್ಯಾಜ್ಯದಿಂದ 11.5 ಮೆಗಾ ವಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಘಟಕವನ್ನೇನೋ ನಿರ್ಮಾಣ ಮಾಡಿದೆ. ಆದರೆ, ಕಾರ್ಯಾರಂಭಗೊಂಡ ದಿನದಿಂದಲೂ ಒಂದಿಲ್ಲೊಂದು ಸಮಸ್ಯೆ ಕಾಡುತ್ತಲೇ ಇದೆ. ಮೊದಲಿಗೆ 5 ಮಂದಿ ಕಾರ್ಮಿಕರನ್ನು ಬಲಿ ಪಡೆದುಕೊಂಡ ಘಟಕ ಪುನರಾರಂಭಗೊಂಡ ನಂತರ ಶಬ್ದ, ಕಸ ಮತ್ತು ಹೊಗೆ ಮೂಲಕ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಏನಾಗುತ್ತಿದೆ?

ಪವರ್ ಪ್ಲಾಂಟ್‌ಗೆ ಹೊಂದಿಕೊಂಡಂತೆ ಮೇಡನಹಳ್ಳಿ, ಲಿಂಗೇಗೌಡನದೊಡ್ಡಿ, ಪ್ರತಿಷ್ಠಿತರೇ ವಾಸಿಸುವ ರೆಸಾರ್ಟ್‌ಗಳು ಇವೆ. ಇಲ್ಲಿ ರಾತ್ರಿ ಆಗುತ್ತಿದ್ದಂತೆ ಆರಂಭಗೊಳ್ಳುವ ಪ್ಲಾಂಟ್‌ನ ಯಂತ್ರಗಳ ಸದ್ದು, ಎಲ್ಲರ ನಿದ್ರೆಯನ್ನು ಕಸಿಯುತ್ತಿದೆ. ಇದರ ಜತೆಗೆ ಹಗಲು-ರಾತ್ರಿ ಎನ್ನದೆ ಗಾಳಿ ಬೀಸಿದೆಡೆ ಸುಳಿಯುವ ಕಸದ ಕೆಟ್ಟ ವಾಸನೆ ಮತ್ತು ಕಲುಷಿತ ಗಾಳಿ ಇಡೀ ಜನ ಸಮೂಹವನ್ನು ಆತಂಕಕ್ಕೆ ದೂಡಿದೆ. ಹಲವಾರು ಮಂದಿ ಶ್ವಾಸಕೋಶ ಸಂಬಂಧಿ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಈಗಲ್‌ಟನ್‌ನಲ್ಲಿ ವಾಸಿಸುತ್ತಿರುವ ಹಲವಾರು ಮಂದಿ ಮನೆಗಳನ್ನು ತೊರೆದು ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ರಾತ್ರಿ ವೇಳೆಯಲ್ಲಿ ಬೆಂಗಳೂರಿನಿಂದ ಕಸ ತುಂಬಿಕೊಂಡು ಲಾರಿಗಳು ಬಂದಾಗ ಅತಿ ಹೆಚ್ಚು ಕೆಟ್ಟ ವಾಸನೆ ಆವರಿಸುತ್ತದೆ. ಇದು ಸಹ ಸ್ಥಳೀಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

ಹಸಿ ಕಸದ್ದೇ ಸಮಸ್ಯೆ

ಪ್ಲಾಂಟ್‌ನಲ್ಲಿ 5 ಮಂದಿ ಕಾರ್ಮಿಕರು ಮೃತಪಟ್ಟ ಘಟನೆಗೂ, ಪ್ರಸ್ತುತ ವಾತಾವರಣ ಕಲುಷಿತಗೊಳ್ಳುತ್ತಿರುವುದಕ್ಕೂ ಹಸಿ ಕಸವೇ ಕಾರಣ ಎನ್ನಲಾಗುತ್ತಿದೆ. ಬೆಂಗಳೂರಿನಿಂದ ಬರುವ ಕಸದಲ್ಲಿ ಶೇ.30 ಹಸಿ ಕಸ ಇರುತ್ತದೆ, ಇದನ್ನು ಶೇ.5ಕ್ಕೆ ಇಳಿಸಿದರೆ ಹೊಗೆ ಮತ್ತು ವಾಸನೆ ಎರಡನ್ನೂ ನಿಯಂತ್ರಿಸಬಹುದಾಗಿದೆ. ಇಲ್ಲವಾದರೆ ಸ್ಥಳೀಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಖಚಿತ ಖಚಿತ.

ಐವರು ಮೃತಪಟ್ಟಿದ್ದರು

ಸ್ಥಾವರದಲ್ಲಿ ಪ್ರಾಯೋಗಿಕ ಕಾರ್ಯಾಚರಣೆ ಚಾಲನೆ ನೀಡಲಾಗಿತ್ತು. 2025ರ ಜ.4ರಂದು ಚಿಮಣಿಯಲ್ಲಿ ಕಸ ಕಟ್ಟಿಕೊಂಡಿತ್ತು. ಸ್ಥಳದಲ್ಲಿದ್ದ ಐವರು ಕಾರ್ಮಿಕರು ಸುರಕ್ಷಾ ಪರಿಕರಗಳಿಲ್ಲದೆ ಚಿಮಣಿಯ ಒಂದು ಭಾಗದ ಕಿಟಕಿ ತೆರೆದು ಕಬ್ಬಿಣದ ಕೋಲಿನಿಂದ ಕಟ್ಟಿಕೊಂಡಿದ್ದ ತ್ಯಾಜ್ಯವನ್ನು ಸರಿಸಲು ಮುಂದಾಗಿದ್ದರು. ಈ ವೇಳೆ ಚಿಮಣಿಯಲ್ಲಿದ್ದ ಬಿಸಿ ಬೂದಿ ಮತ್ತು ಅರೆಬರೆ ಬೆಂದು ಸಿಲುಕಿಕೊಂಡಿದ್ದ ತ್ಯಾಜ್ಯವು ಕಾರ್ಮಿಕರ ಮೇಲೆ ಸಿಡಿದಿತ್ತು. ಘಟನೆಯಲ್ಲಿ ಬಿಹಾರದ ಉಮೇಶ್‌ಕುಮಾರ್ ಸಿಂಗ್, ಸಂಟೂನ್ ಸದಾಯ್, ಅಮಲೇಶ್ ಕುಮಾರ್ ಕಾಮತ್, ಉತ್ತರಪ್ರದೇಶದ ಲಖನ್ ಸಿಂಗ್ ಹಾಗೂ ತರುಣ್ ಕುಮಾರ್ ರಾಯ್ ಅವರಿಗೆ ತೀವ್ರತರವಾದ ಸುಟ್ಟ ಗಾಯಗಳಾಗಿದ್ದವು. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಐವರೂ ಚಿಕಿತ್ಸೆ ಲಿಸದೆ ಮೃತಪಟ್ಟಿದ್ದರು.

ಶೋಕಾಸ್ ನೋಟಿಸ್ ನೀಡಿದ್ದೇವೆ!

ಪವರ್ ಪ್ಲಾಂಟ್‌ನಿಂದ ವಾಸನೆ ಮತ್ತು ಹೊಗೆ ಹೆಚ್ಚಾಗುತ್ತಿದೆ ಎನ್ನುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೆೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಈ ಸಂಬಂಧ ಶೋಕಾಸ್ ನೋಟಿಸ್ ಸಹ ನೀಡಲಾಗಿದೆ. ಇಲ್ಲಿ ಹೆಚ್ಚಾಗಿ ಹಸಿ ಕಸವೇ ಬಳಕೆ ಆಗುತ್ತಿರುವ ಕಾರಣದಿಂದಲೇ ಹೊಗೆ ಹೆಚ್ಚಾಗಿದೆ. ಇದನ್ನು ಕಡಿಮೆ ಮಾಡಿಕೊಂಡರೆ ಹೊಗೆ ಮತ್ತು ವಾಸನೆ ಎರಡೂ ಇರುವುದಿಲ್ಲ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಅಧಿಕಾರಿ ಸಿ.ಆರ್.ಮಂಜುನಾಥ್ ಹೇಳುತ್ತಾರೆ.

ಹಾಗೇನಿಲ್ಲ.. ಎಲ್ಲವೂ ಸರಿ ಇದೆ..!

ಪರಿಸರ ಮಾಲಿನ್ಯ ಆಗಿತ್ತು ಎನ್ನುವುದನ್ನು ಒಪ್ಪಿಕೊಳ್ಳುವ ನಿಗಮದ ಅಧಿಕಾರಿಗಳು, ಈಗ ಅಂತಹ ಪರಿಸ್ಥಿತಿಯೇ ಇಲ್ಲ, ಎಲ್ಲವನ್ನೂ ಸರಿಪಡಿಸಿದ್ದೇವೆ ಎನ್ನುತ್ತಾರೆ. ಮೊದಲಿಗೆ ವಾಸನೆ ಮತ್ತು ಹೊಗೆ ಬಗ್ಗೆ ದೂರು ಬಂದಿದ್ದವು. ಈ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಎಲ್ಲವನ್ನೂ ನಿಯಂತ್ರಣಕ್ಕೆ ತಂದಿದ್ದೇವೆ. ಈಗ ಯಾವುದೇ ಸಮಸ್ಯೆ ಇಲ್ಲ, ಮಳೆಗಾಲ ಆಗಿರುವ ಕಾರಣ ಕಸ ಸ್ವಲ್ಪ ಹಸಿಯಾಗಿದೆ ಎನ್ನುವುದು ಬಿಟ್ಟರೆ, ಸಮಸ್ಯಾತ್ಮಕವಾಗಿ ಇಲ್ಲ ಎಂದು ಹೇಳುತ್ತಾರೆ ಕೆಪಿಸಿಎಲ್‌ನ ಅಧಿಕಾರಿ ಸತೀಶ್ ಕುಮಾರ್.

ಮೊದಲು ಯಂತ್ರದ ಶಬ್ದ ಹೆಚ್ಚಾಗಿತ್ತು, ಇದರ ವಿರುದ್ಧ ಸ್ಥಳೀಯರು ದೂರಿದ ಹಿನ್ನೆಲೆಯಲ್ಲಿ ಶಬ್ದ ಬರುವುದು ಸ್ವಲ್ಪ ನಿಂತಿದೆ. ಆದರೆ, ಲಾರಿಗಳು ಬಂದಾಗ ಕೆಟ್ಟ ವಾಸನೆ ಈ ಭಾಗದಲ್ಲೆಲ್ಲಾ ಆವರಿಸುತ್ತದೆ. ಇದರ ನಿಯಂತ್ರಣ ಆಗಬೇಕಿದೆ.ನಾಗೇಶ್, ಸ್ಥಳೀಯ ಮೇಡನಹಳ್ಳಿಪವರ್ ಪ್ಲಾಂಟ್ ಸಂಬಂಧ ಸಾಕಷ್ಟು ದೂರುಗಳು ಬಂದಿವೆ. ಈಗಾಗಲೇ ಶೋಕಾಸ್ ನೋಟಿಸ್ ನೀಡಲಾಗಿದೆ. ಹಸಿ ಕಸ ಕಡಿಮೆ ಮಾಡಿಕೊಂಡರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ.ಸಿ.ಆರ್.ಮಂಜುನಾಥ್ಜಿಲ್ಲಾ ಅಧಿಕಾರಿ, ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ದಕ್ಷಿಣ ಜಿಲ್ಲೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net