

ಮುಂಡರಗಿ: ಖಾಸಗಿ ಕಂಪನಿಯೊಂದು ಪೂರೈಸಿದ ಸೂರ್ಯಕಾಂತಿ ಬೀಜಗಳನ್ನು ಬಿತ್ತನೆ ಮಾಡಿದ್ದ ರೈತರು ಬೆಳೆ ಬಾರದೆ ಬೆಳೆ ನಷ್ಟ ಅನುಭವಿಸಿದ್ದಾರೆ
ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಜಾಗೃತ ವೃತ್ತ, ಗಾಂಧಿ ವೃತ್ತ, ಹೇಮರಡ್ಡಿ ಮಲ್ಲಮ್ಮ ವೃತ್ತದ ಮಾರ್ಗವಾಗಿ ಕೊಪ್ಪಳ ಸರ್ಕಲ್‌ಗೆ ಆಗಮಿಸಿ ಅಲ್ಲಿ ಕೆಲ ಸಮಯ ಹೆದ್ದಾರಿ ತಡೆ ನಡೆಸಿ ನಂತರ ತಹಸೀಲ್ದಾರ್ ಕಚೇರಿಗೆ ತಲುಪಿತು.
ತಾಲೂಕಿನ ವಿವಿಧ ಗ್ರಾಮಗಳ ರೈತರು ಸಾವಿರಾರು ಎಕರೆ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಿದ್ದಾರೆ. ಖಾಸಗಿ ಕಂಪನಿ ಪೂರೈಸಿದ್ದ ಬಿತ್ತನೆ ಬೀಜಗಳು ಕಳಪೆಯಾಗಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ ಎಂದು ರೈತರು ದೂರಿದರು.
ನೀರಾವರಿ ಜಮೀನುಳ್ಳ ರೈತರು ಸಾಲ- ಸೂಲ ಮಾಡಿ ಎಕರೆಗೆ 20ರಿಂದ 25ಸಾವಿರ ರೂ. ಖರ್ಚು ಮಾಡಿ ಸೂರ್ಯಕಾಂತಿ ಬಿತ್ತನೆ ಮಾಡಿದ್ದರು. ಆದರೆ, ಈಗ ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ ಎಂದು ಅಳಲು ತೊಡಿಕೊಂಡರು.
ಸ್ಥಳಕ್ಕೆ ಗ್ರೇಡ್- 2 ತಹಸೀಲ್ದಾರ್ ಕೆ. ರಾಧಾ, ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶಮೂರ್ತಿ ಟಿ.ಸಿ., ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು. ನಾಲ್ವರು ಕೃಷಿ ತಜ್ಞರು ಸೂರ್ಯಕಾಂತಿ ಬೆಳೆ ಪರಿಶೀಲಿಸಿದ್ದು, ವರದಿ ಬಂದ ನಂತರ ಕ್ರಮ ಜರುಗಿಸಲಾಗುವುದು ಎಂದರು.
ನಂತರ ಗದಗ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಕಚೇರಿಯ ಅಧಿಕಾರಿ ಆಗಮಿಸಿ ರೈತರೊಂದಿಗೆ ಚರ್ಚಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಇಟಗಿ, ಚಂದ್ರಕಾಂತ ಉಳ್ಳಾಗಡ್ಡಿ, ಪ್ರಕಾಶ ಸಜ್ಜನರ, ಎಚ್.ಬಿ. ಕುರಿ, ಶರಣಪ್ಪ ಕಂಬಳಿ, ಗವಿಸಿದ್ದಯ್ಯ ಹಳ್ಳಿಕೇರಿಮಠ, ಸೋಮನಗೌಡ ಗೌಡರ, ಕೆ.ಎ. ದೇಸಾಯಿ, ಸೋಮಣ್ಣ ಹೈತಾಪೂರ, ಮಂಜುನಾಥ ಕಲ್ಲಳ್ಳಿ, ಅಂದಪ್ಪ ಕುರಿ, ಬೀರಪ್ಪ ಮಲಾರ್ಜಿ, ಆರ್.ಎಸ್. ಕುರಿ, ಈರಣ್ಣ ಕವಲೂರ, ಅಂದಪ್ಪ ಹಂದ್ರಾಳ, ದಶರಥ ಕುರಿ, ದೇವಪ್ಪ ಡೊಣ್ಣಿ, ಗವಿಸಿದ್ದಪ್ಪ ಜಂತ್ಲಿ, ಕೆ.ಎಸ್. ಚಿಕ್ಕಣ್ಣವರ, ಮರಿತಮ್ಮಪ್ಪ ಆದಮ್ಮನವರ, ಜೆ.ಪಿ. ಬಾರಕೇರ, ನಂದಿಕೇಶ ಅಳವಂಡಿ, ಸಣ್ಣಮೈಲಪ್ಪ ಹರಿಜನ, ಮಂಜುನಾಥ ಮುಧೋಳ, ಮಂಜಪ್ಪ ಬಂಡಾರಿ, ಪ್ರಕಾಶ ದಳವಾಯಿ, ದೇವಪ್ಪ ಮೋರನಾಳ, ಇತರರು ಇದ್ದರು.