

ರಾಮನಗರ : ಅಪಘಾತದಲ್ಲಿ ಸಾಯುವವರ ಸಂಖ್ಯೆ ಹೆಚ್ಚಿರುವ ಕಾರಣ ಅವಘಡ ಸಂಭವಿಸಿದ ತಕ್ಷಣವೇ ಚಿಕಿತ್ಸೆ ದೊರೆಯುವಂತೆ ಮಾಡಲು ಪ್ರತಿ 125 ಕಿಮೀಗೆ ಒಂದರಂತೆ ಪಾಲಿಟ್ರಾಮಾ ಕೇಂದ್ರ ಸ್ಥಾಪನೆ ಮಾಡುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇನೆ ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ ಭಾನುವಾರ ಸಂಸದ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಇಂದು ದೇಶದಲ್ಲಿ ಕ್ಯಾನ್ಸರ್‌ನಿಂದ ಶೇ.8 ಮಂದಿ ಸಾಯುತ್ತಿದ್ದರೆ, ಅಪಘಾತದಿಂದ ಶೇ.13 ಮಂದಿ ಅಸುನೀಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತುರ್ತು ಕ್ರಮಕ್ಕೆ ಮನವಿ ಮಾಡಲಾಗಿದೆ ಎಂದರು.
ಬ್ರೆಸ್ಟ್ ಕ್ಯಾನ್ಸರ್‌ಅನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಪಾರಾಗಬಹುದು. ಈ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾಸ್ಪತ್ರೆ ಮೋನೋಗ್ರಫಿ ಕೇಂದ್ರ ಆರಂಭಿಸಲು ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು. ಇದಕ್ಕಾಗಿ ಈಗಾಗಲೇ ಖಾಸಗಿ ಸಂಸ್ಥೆಗಳ ಸಿಎಸ್‌ಆರ್ ನಿಧಿ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಎಂಆರ್‌ಐ ಸ್ಕಾೃನ್ ಯಂತ್ರ ಅಳವಡಿಸಲು ಕ್ರಮವಹಿಸಲಾಗುವುದು ಎಂದ ಅವರು, ಸಾತನೂರು ಕೋಡಿಹಳ್ಳಿ ಭಾಗಕ್ಕೆ ಎರಡು ಆಂಬುಲೆನ್ಸ್ ಒದಗಿಸಲಾಗುತ್ತಿದೆ ಎಂದು ಮಾಹಿತಿ ನಿಡಿದರು.
ಎಸ್‌ಟಿಆರ್‌ಆರ್ ನಿರ್ಮಾಣ:
ಬೆಂಗಳೂರಿನ ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಎಸ್‌ಟಿಆರ್‌ಆರ್ ನಿರ್ಮಾಣಕ್ಕೆ ಅನುಮೋದನೆ ನೀಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರ್ ಅವರಿಗೆ ನಾನು ಮತ್ತು ಮಾಜಿ ಪ್ರಧಾನಿ ದೇವೇಗೌಡರು ಮನವಿ ಮಾಡಿದ್ದೆವು. ಇದಕ್ಕೆ ಸ್ಪಂದಿಸಿ 4,750 ಕೋಟಿ ರೂ. ಅನುಮೋದನೆ ನೀಡಿದ್ದಾರೆ. ಇದು ದಾಬಸ್‌ಪೇಟೆ, ಅರಿಶಣಕುಂಟೆ, ಮಾಗಡಿ, ರಾಮನಗರ, ಕನಕಪುರ, ಆನೇಕಲ್ ನಂತರ ಹೊಸೂರು ಸಂಪರ್ಕ ಕಲ್ಪಿಸುತ್ತದೆ. ಇದಕ್ಕೆ ಜಾಗತಿಕ ಟೆಂಡರ್ ಕರೆಯಲಾಗಿದೆ ಎಂದು ಮಂಜುನಾಥ್ ತಿಳಿಸಿದರು.
ಅಲ್ಲದೆ, ಬೆಂಗಳೂರು- ಮೈಸೂರು ಅಕ್ಸೆಸ್ ಕಂಟ್ರೋಲ್ ಹೆದ್ದಾರಿಯ ಕದಂಬ ಜಂಕ್ಷನ್ ಬಳಿ ಸಂಚಾರ ದಟ್ಟಣೆ ನಿಯಂತ್ರಿಸಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಭೇಟಿ ಮಾಡಿ ಪರಿಶೀಲನೆ ಮಾಡಲಾಗಿದೆ. ಹೈವೇಗೆ ಅಂಡರ್ ಗ್ರೌಂಡ್ ಟನಲ್ ಮೂಲಕ ಸಂಪರ್ಕ ಕಲ್ಪಿಸುವುದು. ಇಲ್ಲವೇ 3-4 ಕಿ.ಮೀ ಮುಂಚಿತವಾಗಿಯೇ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವಂತೆ ಮಾಡುವ ಎರಡು ಸಾಧ್ಯತೆಗಳನ್ನು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದು ಅವರ ಅಧ್ಯಕ್ಷತೆಯಲ್ಲಿಯೇ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಎಂಎಲ್‌ಸಿ ಸಿ.ಪಿ. ಯೋಗೇಶ್ವರ್, ಮುಖಂಡರಾದ ಗೌತಮ್ ಗೌಡ, ಎಸ್.ಆರ್. ನಾಗರಾಜು, ಮುರಳೀಧರ್, ಪಿ.ಎಸ್. ಜಗದೀಶ್, ಪ್ರಕಾಶ್, ಪದ್ಮನಾಭ್, ಸಬ್ಬಕೆರೆ ಶಿವಲಿಂಗಯ್ಯ, ಕಾಳಯ್ಯ, ದೊರೆಸ್ವಾಮಿ, ರಾಮಕೃಷ್ಣಯ್ಯ, ಚಂದ್ರಶೇಖರ್, ನಾಗೇಶ್, ರುದ್ರದೇವರು, ದರ್ಶನ್, ಚಂದ್ರಶೇಖರ ರೆಡ್ಡಿ, ಚಂದ್ರಣ್ಣ, ಕುವಾರ್, ನರಸಿಂಹಮೂರ್ತಿ, ಶಿವಾನಂದ್, ಹೇವಾವತಿ, ಜಯಕುವಾರ್, ಕೆಂಪರಾಜು, ರಾವೇಂದ್ರ, ಮಹಾದೇವ್, ಚೆನ್ನಪ್ಪ, ಚಂದನ್, ಪ್ರಶಾಂತ್, ಆನಂದ್, ದೇವರಾಜು, ಅಪ್ಪಾಜಣ್ಣ ಮುಂತಾದವರಿದ್ದರು.
ವಾರದಲ್ಲಿ ಒಮ್ಮೆಯಾದರೂ ಲಭ್ಯ
ಪತ್ನಿ ಅನಸೂಯಾ ಅವರೊಟ್ಟಿಗೆ ಪೂಜಾ ವಿಧಿ ವಿಧಾನ ಪೂರ್ಣಗೊಳಿಸಿ, ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಜನರ ಒಳಿತಿಗಾಗಿ ಪ್ರಾರ್ಥಿಸಿಯೇ ಕಚೇರಿ ಉದ್ಘಾಟನೆ ಮಾಡಿದ ಸಂಸದ ಡಾ.ಸಿ.ಎನ್.ಮಂಜುನಾಥ್, ವಾರದಲ್ಲಿ ಕನಿಷ್ಠ ಒಮ್ಮೆಯಾದರೂ ಈ ಭಾಗದ ಜನರಿಗೆ ಸಿಗುವ ಮೂಲಕ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿವುದಾಗಿ ಭರವಸೆ ನೀಡಿದರು.
ರಾಮನಗರ ಜಿಲ್ಲಾ ಕೇಂದ್ರ ಅಷ್ಟೇ ಅಲ್ಲ, ಇದು ಎಲ್ಲ ತಾಲೂಕುಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಹಿನ್ನೆಲೆಯಲ್ಲಿ ರಾಮನಗರದಲ್ಲಿ ಕಚೇರಿ ಆರಂಭಿಸಲಾಗಿದೆ ಎಂದು ತಿಳಿಸಿದರು.
ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ
ಮುನಿರತ್ನ ವಿರುದ್ಧ ಪ್ರಕರಣದಲ್ಲಿ ಕಾನೂನು ಏನು ಕ್ರಮ ಕೈಗೊಳ್ಳುತ್ತದೆ ಎನ್ನುವುದನ್ನು ನೊಡೋಣ ಎಂದು ಸಂಸದ ಡಾ.ಸಿ.ಎನ್ ಮಂಜುನಾಥ್ ಹೇಳಿದರು. ಆ ರೀತಿಯ ಹೇಳಿಕೆ ನಾನು ನೀಡಿಲ್ಲ ಎಂದು ಅವರು ಹೇಳಿದ್ದಾರೆ. ಒಂದು ವೇಳೆ ಮುನಿರತ್ನ ಅವರು ಆ ರೀತಿ ಹೇಳಿಕೆ ನೀಡಿದ್ದರೆ ಅದು ತಪ್ಪು. ಯಾರೇ ಆದರೂ ಆ ರೀತಿಯ ಪದ ಬಳಕೆ, ನಿಂದನೆ ಮಾಡಬಾರದು ಎಂದರು.