ಎಸ್‌ಎಂಕೆ ಕಳೆದುಕೊಂಡು ಬಡವಾದ ರಾಜಕೀಯ ಕ್ಷೇತ್ರ

ಎಸ್‌ಎಂಕೆ ಕಳೆದುಕೊಂಡು ಬಡವಾದ ರಾಜಕೀಯ ಕ್ಷೇತ್ರ
Published on

ಅರಸೀಕೆರೆ: ಅಪರೂಪದ ರಾಜಕಾರಣಿಯಾದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಕಳೆದುಕೊಂಡು ರಾಜಕೀಯ ಕ್ಷೇತ್ರ ಬಡವಾಗಿದೆ ಎಂದು ಬಿಜೆಪಿ ಮುಖಂಡ ಜಿವಿಟಿ ಬಸವರಾಜು ಹೇಳಿದರು.

ನಗರದ ಆಡಳಿತ ಸೌಧದ ಕಚೇರಿ ಮುಂಭಾಗ ಬುಧವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಮಾತನಾಡುವಾಗ ಅಳೆದು ತೂಗಿ ಕ್ರಮಬದ್ಧವಾಗಿ ಮಾತನಾಡುತ್ತಿದ್ದ ಮಾದರಿ ರಾಜಕಾರಣಿ, ಸಕಾರಾತ್ಮಕ ಚಿಂತನೆಗಳಿಂದ ಕ್ರೀಡೆ ಮತ್ತು ಕಲಾರಾಧಕರಾಗಿದ್ದ ಎಸ್‌ಎಂಕೆ ವೈಯಕ್ತಿಕವಾಗಿ ಯಾರನ್ನೂ ಟೀಕಿಸದ ಅಪರೂಪದ ಸಭ್ಯ ರಾಜಕಾರಣಿಯಾಗಿದ್ದರು ಎಂದರು.

ಆಡು ಮುಟ್ಟದ ಸೊಪ್ಪಿಲ್ಲ, ಎಸ್‌ಎಂಕೆ ನಿಭಾಯಿಸದ ಪದವಿಗಳಿಲ್ಲ. ಮುಖ್ಯಮಂತ್ರಿ, ವಿದೇಶಾಂಗ ಸಚಿವ, ರಾಜ್ಯಪಾಲ, ವಿಧಾನಸಭೆ, ವಿಧಾನಪರಿಷತ್ ಸದಸ್ಯ, ಲೋಕಸಭೆ, ರಾಜ್ಯಸಭಾ ಸದಸ್ಯರಾಗಿ, ಉಪಮುಖ್ಯಮಂತ್ರಿಯಾಗಿ, ಪಕ್ಷದ ಅಧ್ಯಕ್ಷರಾಗಿ, ರಾಜ್ಯದ ವಿವಿಧ ಖಾತೆಯ ಮಂತ್ರಿಗಳಾಗಿ ಅಪಾರ ಜನ ಮನ್ನಣೆ ಗಳಿಸಿದ್ದರು ಎಂದು ಬಣ್ಣಿಸಿದರು.

ಕಾಂಗ್ರೆಸ್ ಮುಖಂಡ ಜಿಟಿಎಸ್ ಗೌಸ್‌ಖಾನ್ ಮಾತನಾಡಿ, ಬೆಂಗಳೂರು ಸಿಲಿಕಾನ್ ಸಿಟಿಯಾಗಿ ವಿಶ್ವ ಮಾನ್ಯತೆಗಳಿಸಿದ್ದು, ಎಸ್‌ಎಂಕೆ ಅವರ ಪ್ರಗತಿಪರ ಮತ್ತು ವೈಜ್ಞಾನಿಕ ಹಾಗೂ ದೂರದೃಷ್ಟಿಯ ಚಿಂತನೆಯ ಫಲವಾಗಿದೆ. 60 ವರ್ಷಗಳ ರಾಜಕೀಯದಲ್ಲಿ ಅಜಾತಶತ್ರುವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು. ಮಾದನಹಳ್ಳಿ ಚಂದ್ರಶೇಖರ್, ಮಂಜುನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net