

ಬೆಂಗಳೂರು: ಜಾನುವಾರುಗಳಿಗೆ ಆಸರೆಯಾಗಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಹಮ್ಮದ್ ರಫೀಕ್ ಹೃದಯಾಘಾತದಿಂದ ಇಂದು (ಗುರುವಾರ) ಮೃತಪಟ್ಟಿದ್ದಾರೆ.
ನಗರದ ವಿವಿಧ ಠಾಣೆಗಳಲ್ಲಿ ಕೆಲಸ ಮಾಡಿದ್ದ ಮಹಮ್ಮದ್ ರಫೀಕ್, ಕರೊನಾ ಲಾಕ್ಡೌನ್ನಂತಹ ಸಂಕಷ್ಟದ ಸಮಯದಲ್ಲಿ ಗೋವುಗಳಿಗೆ ರಕ್ಷಣೆ ನೀಡಿ ಆಹಾರ ವ್ಯವಸ್ಥೆ ಮಾಡಿದ್ದರು. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರುವೊಂದನ್ನ ಸಾಕುತ್ತಿದ್ದರು. ವರ್ಗಾವಣೆ ಆದರೂ ಆ ಕರುವನ್ನ ತನ್ನ ಜತೆಯಲ್ಲೇ ಕರೆದೊಯ್ದು ಸಾಕಿದ್ದರು. ಇತ್ತೀಚಿಗೆ ಖಾಸಗಿ ವಾಹಿನಿಯೊಂದರ ಸರಿಗಮಪ ಶೋ ಕಾರ್ಯಕ್ರಮದಲ್ಲಿ ಪೊಲೀಸ್ ಪೇದೆ ಸುಬ್ರಹ್ಮಣಿ ಜತೆ ಮಹಮ್ಮದ್ ರಫೀಕ್ ವೇದಿಕೆ ಹಂಚಿಕೊಂಡಿದ್ದರು.
ಇಂದು ಬೆಳಗ್ಗೆ ಸ್ನಾನಕ್ಕೆ ತೆರಳಿದ್ದ ಮಹಮ್ಮದ್ ರಫೀಕ್ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಕೂಡಲೆ ವೈದ್ಯರನ್ನು ಕುಟುಂಬಸ್ಥರು ಮನೆಗೆ ಕರೆಸಿದ್ದರು. ಅಷ್ಟರಲ್ಲಿ ಮಹಮ್ಮದ್ ರಫೀಕ್ ಕೊನೆಯುಸಿರೆಳೆದಿದ್ದರು.