

ಬೆಂಗಳೂರು: ದೇವಸ್ಥಾನ ಮತ್ತು ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಕುರಿತು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ಡೆಸಿಬಲ್ ಪ್ರಕಾರ ಎಲ್ಲರೂ ನಿಯಮ ಪಾಲನೆ ಮಾಡಬೇಕು. ಆ ನಿಟ್ಟಿನಲ್ಲಿ ಯಾವ ಯಾವ ಪೂಜಾ ಸ್ಥಳಗಳಲ್ಲಿ ಹೇಗೆ ಧ್ವನಿವರ್ಧಕ ಬಳಸಬೇಕು ಎಂದು ಎಲ್ಲರಿಗೂ ತಿಳಿಸಿಕೊಡುತ್ತಿದ್ದೇವೆ. ಹೈಕೋರ್ಟ್ ಆದೇಶದಂತೆ ನಾವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್ ಪಂತ್, ಧ್ವನಿವರ್ಧಕ ಬಳಕೆ ಕುರಿತು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಕೊಟ್ಟಿರುವ ಡೆಸಿಬಲ್ ಪ್ರಕಾರ ನಿಯಮ ಪಾಲಿಸಬೇಕು. ಸ್ಥಳೀಯ ಮಟ್ಟದಲ್ಲಿ ಡಿಸಿಪಿ ಹಾಗೂ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಲಾಗಿದ್ದು, ಧ್ವನಿವರ್ಧಕ ಅಳವಡಿಸಿರುವ ಸ್ಥಳಗಳಿಗೆ ತೆರಳಿ ನೋಟಿಸ್ ನೀಡುವ ಕೆಲಸ ಮಾಡಿದ್ದೇವೆ. ಆಡಳಿತ ಮಂಡಳಿಯವರಿಗೂ ಅರಿವು ಮೂಡಿಸಿದ್ದೇವೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಮ್ಮವರಿಗೆ ಟ್ರೈನಿಂಗ್ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದರು.