

ಅರಸೀಕೆರೆ: ಶಾಲಾ ಹಂತದಲ್ಲಿ ನಡೆಯುವ ಪ್ರತಿಭಾ ಕಾರಂಜಿ ಸ್ಪರ್ಧೆಯಿಂದ ಮಕ್ಕಳ ನೈಜ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಿದೆ ಎಂದು ಬಿಇಒ ಮೋಹನ್‌ಕುಮಾರ್ ಹೇಳಿದರು.
ತಾಲೂಕಿನ ಬಾಣಾವರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿಯ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಗಂಡಸಿ ಸೇಂಟ್ ಜಾನ್ ಆಂಗ್ಲ ಶಾಲೆಯ ವಿದ್ಯಾರ್ಥಿ ಮೋಕ್ಷಿತ್ ಎನ್. ಗೌಡಗೆ ಪ್ರಥಮ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು.
ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳು ಶಿಕ್ಷಣದ ಭಾಗವಾಗಿದೆ ಎಂಬುದನ್ನು ಮರೆಯಬಾರದು. ಪ್ರಾಥಮಿಕ ಶಾಲಾ ಹಂತದಲ್ಲಿ ನಡೆಯುವ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಮಹತ್ತರ ತಿರುವು ನೀಡಲಿವೆ. ಈ ನಿಟ್ಟಿನಲ್ಲಿ ಪಾಲಕರು ಹಾಗೂ ಶಿಕ್ಷಕರ ಪರಿಶ್ರಮ ಶ್ಲಾಘನೀಯ ಎಂದರು.
ಸಂಯೋಜಕ ಮಲ್ಲೇಶ್, ಶಾಲಾ ಆಡಳಿತಾಧಿಕಾರಿ ಡಾ.ಮುಖೇಶ್, ನಂದನ್ ಸೇರಿದಂತೆ ಹಲವರು ಹಾಜರಿದ್ದರು.