‘ಕುಟುಂಬಕ್ಕೊಂದು ನಿವೇಶನ’ ಸರ್ಕಾರ ಕ್ರಮ

Web12
Published on

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮಾಹಿತಿ ಶೀಘ್ರವೇ ಅನುಮೋದನೆ

ಬಾಗೇಪಲ್ಲಿ: ಕುಲ ಕಸುಬು ನಂಬಿ ಜೀವನ ನಡೆಸುತ್ತಿರುವ ಭೋವಿ ಜನಾಂಗಕ್ಕೆ ಗುಡ್ಡಗಾಡು ಪ್ರದೇಶದಲ್ಲಿರುವ ಬಂಡೆಯನ್ನು ಮೀಸಲುಡುವ ಹಾಗೂ ಕುಟುಂಬಕ್ಕೊಂದು ನಿವೇಶನ ನೀಡುವ ಯೋಜನೆಗೆ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲ ಸಿದ್ಧತೆ ನಡೆಯುತ್ತಿದ್ದು, ಶೀಘ್ರವೇ ಮುಖ್ಯಮಂತ್ರಿಗಳಿಂದ ಅನುಮೋದನೆ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ಬಾಗೇಪಲ್ಲಿ ಪಟ್ಟಣದ ಒಂದನೇ ವಾರ್ಡನ ಶಿರಡಿ ಸಾಯಿಬಾಬಾ ಮಂದಿರದ ಬಳಿ ನೂತನವಾಗಿ ನಿರ್ಮಿಸಿರುವ ಭೋವಿ ಭವನವನ್ನು ಲೋಕಾರ್ಪಣೆ ಹಾಗೂ ಶ್ರೀ ಸಿದ್ದರಾಮೇಶ್ವರರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭೋವಿ ಜನಾಂಗದ ಮಕ್ಕಳು ಕುಲವೃತ್ತಿಯಿಂದ ಹೊರ ಬಂದು ಸಮಾಜದಲ್ಲಿ ಬೆಳೆಯಬೇಕಾದರೆ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಬಾಗೇಪಲ್ಲಿಯಲ್ಲಿ ಭೋವಿ ಭವನ ನಿರ್ಮಿಸುವುದು ಸರ್ಕಾರದ ಸಾಧನೆ. ಮಕ್ಕಳ ಭವಿಷ್ಯ ರೂಪಿಸುವ ಶೈಕ್ಷಣಿಕ ಪ್ರಗತಿಗೆ ಆಗತ್ಯ ಬುನಾದಿ ಹಾಕಬೇಕಾಗಿದೆ. ಇಂದು ಡಿಜಿಟಲ್ ತಂತ್ರಜ್ಞಾನಕ್ಕೆ ಪೂರಕವಾದ ಪುಸ್ತಕ ಬಂಡಾರವನ್ನು ಪರಿಚಯಿಸಿದ್ದು, ಮಕ್ಕಳು ಅದರ ಪ್ರಯೋಜನ ಪಡೆದು ಉನ್ನತ ಸ್ಥಾನ ಅಲಂಕರಿಸಬೇಕಾಗಿದೆ ಎಂದರು.

ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಕಲ್ಲುನ್ನು ಒಡೆಯುವವರ ಮಕ್ಕಳು ಕಲ್ಲು ಕ್ವಾರಿಯಲ್ಲಿ ಕೂಲಿ ಕಾರ್ಮಿಕರಾಗಿ ಉಳಿಯಬೇಕಾಗಿಲ್ಲ. ಕಟ್ಟಡ ಕಾರ್ಮಿಕರ ಮಕ್ಕಳು ಕಟ್ಟಡ ಕಾರ್ಮಿಕರಾಗಬೇಕಾಗಿಲ್ಲ. ಕಾಯಕ ವರ್ಗ ನಂಬಿ ಜೀವನ ನಡೆಸುತ್ತಿರುವ ಭೋವಿ ಜನಾಂಗದವರು ಮಕ್ಕಳ ಬದುಕಿನ ಪರಿವರ್ತನೆ ಬಗ್ಗೆ ಆಲೋಚನೆ ಮಾಡಿದಾಗ ಮಕ್ಕಳು ಶೈಕ್ಷಣಿಕವಾಗಿ ಬೆಳೆಯಲು ಸಹಾಯಕವಾಗುತ್ತದೆ. ಜನಾಂಗದ ಎಷ್ಟೋ ಸಾಧಕರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆದ್ದರಿಂದ ಭೋವಿ ಜನಾಂಗದ ಎಲ್ಲರೂ ಶೈಕ್ಷಣಿಕವಾಗಿ ಮುಂದುವರೆಯಬೇಕಾಗಿದೆ ಭೋವಿ ಜನಾಂಗದ ಏಕೈಕ ಸಂಸದ ಕೋಲಾರದ ಮಲ್ಲೇಶ್ ಬಾಬು, ಚಿಕ್ಕವಯಸ್ಸಿನಲ್ಲೇ ಐಆರ್‌ಎಸ್ ಅಧಿಕಾರಿಯಾಗಿರುವ ಹಂಸಶ್ರೀ ಅವರನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು ಎಂದರು.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ತಾಲೂಕಿನ ಭೋವಿ ಜನಾಂಗದವರು ಮಕ್ಕಳನ್ನು ಕುಲ ಕಸುಬಿಗಷ್ಟೇ ಸೀಮಿತಗೊಳಿಸದೆ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಭೋವಿ ಭವನ ನಿರ್ಮಾಣಗೊಳ್ಳಲು ಹಲವು ಮುಖಂಡರ ಶ್ರಮ ಹಾಗೂ ಪ್ರಯತ್ನ ಕಾರಣವಾಗಿದ್ದು, ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಆಂಜನೇಯಲು ಅವರು 1.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವುದರಿಂದ ಭವನ ನಿರ್ಮಾಣವಾಗಿದೆ. ಕಾಂಗ್ರೆಸ್ ಸರ್ಕಾರ ಜನಾಂಗದ ಅಭಿವೃದ್ಧಿಗೆ ಕ್ರಮವಹಿಸುತ್ತಿದೆ ಎಂದರು.

ಕೋಲಾರ ಲೋಕಾಸಭಾ ಕ್ಷೇತ್ರದ ಸಂಸದ ಮಲ್ಲೇಶ್‌ಬಾಬು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ತೇಜಾನಂದರೆಡ್ಡಿ, ಮುಖಂಡರಾದ ಪಿ.ಡಿ.ವೆಂಕಟರಾಮ್, ಎಂ.ವಿ.ಕೃಷ್ಣಪ್ಪ, ಕೆ.ವಿ.ಶ್ರೀನಿವಾಸ್, ಕೆ.ಟಿ.ವೀರಾಂಜನೇಯ, ವಿನಯ್ ಕುಮಾರ್, ವೆಂಕಟೇಶ್, ಆರ್.ವೆಂಕಟೇಶ್, ಸಿ.ಆರ್.ರಮೇಶ್, ಕೆ.ಆರ್.ನರೇಂದ್ರಬಾಬು, ಅಶ್ವತ್ಥಪ್ಪ, ರಂಗಸ್ವಾಮಿ, ರಘು, ಆಂಜಿನಪ್ಪ, ಕೆ.ನಾಗರಾಜು, ಸೋಮು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net