ಏಕಾಏಕಿ ಮಳೆಗೆ ತೊಯ್ದ ಭತ್ತದ ರಾಶಿ

ಕಂಪ್ಲಿ ಎಪಿಎಂಸಿ ಆವರಣದಲ್ಲಿ ಮಳೆಗೆ ತೊಯ್ದು ಭತ್ತದ ರಾಶಿಯನ್ನು ಒಣಗಿಸುತ್ತಿರುವುದು.
ಕಂಪ್ಲಿ ಎಪಿಎಂಸಿ ಆವರಣದಲ್ಲಿ ಮಳೆಗೆ ತೊಯ್ದು ಭತ್ತದ ರಾಶಿಯನ್ನು ಒಣಗಿಸುತ್ತಿರುವುದು.
Published on

ಕಂಪ್ಲಿ: ತಾಲೂಕಿನಾದ್ಯಂತ ಶುಕ್ರವಾರ ರಾತ್ರಿ ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಮೂರು ಗಂಟೆ ಕಾಲ 28.4ಮಿಮೀ ಮಳೆ ಸುರಿದಿದೆ.

ಹಗಲೆಲ್ಲ ಪ್ರಖರ ಬಿಸಿಲಿದ್ದು, ಸಂಜೆ ಮಳೆ ಲಕ್ಷಣ ಕಾಣದೆ ಏಕಾಏಕಿ ಮಳೆ ಸುರಿದಿದೆ. ಎಪಿಎಂಸಿ ಆವರಣದಲ್ಲಿ ಭತ್ತ ಒಣಗಿಸಲು ಹಾಕಿದ್ದು, ಕೆಲ ರೈತರು ರಾಶಿಗೆ ತಾಡಪಾಲು ಮುಚ್ಚದ ಪರಿಣಾಮ ಮಳೆಗೆ ಭತ್ತ ತೊಯ್ದಿವೆ. ಕೆಲವು ರಾಶಿಗೆ ತಾಡಪಾಲು ಹೊದಿಸಿದ್ದರೂ ನೀರು ಹೊಕ್ಕು ಭತ್ತ ಹಾನಿಯಾಗಿದೆ. ಭತ್ತ ಚೀಲ ಟ್ರ್ಯಾಕ್ಟರ್‌ನಲ್ಲಿ ಲೋಡಿಂಗ್ ಮಾಡಿದ್ದು, ಅವೂ ಮಳೆಗೆ ತೊಯ್ದು ಹಾಳಾಗಿದೆ.

ಮಳೆ ಲಕ್ಷಣ ಇಲ್ಲದಿದ್ದರಿಂದ ತಾತ್ಸಾರ ಮಾಡಿದೆವು. ಗಂಗಾ ಕಾವೇರಿ 75 ಕೆಜಿಗೆ 1370 ರೂ., ಆರ್‌ಎನ್‌ಆರ್ ಭತ್ತ 75 ಕೆಜಿಗೆ 1520 ರೂ. ಗಳಂತೆ ಬೆಲೆ ನಿಗದಿಪಡಿಸಲಾಗಿತ್ತು. ಶನಿವಾರ ಭತ್ತ ತೂಕಮಾಡಿ ಸಾಗಿಸಬೇಕಿತ್ತು. ಆದರೆ ಈಗ ನಿಗದಿಪಡಿಸಿದ ಬೆಲೆ ದರ ಇರುವುದಿಲ್ಲ. ಮತ್ತೆ ಭತ್ತ ಒಣಗಿಸಿ ಮಾರಾಟ ಮಾಡಬೇಕಿದ್ದು, ಖರ್ಚು ಹೆಚ್ಚಾಗಲಿದೆ. ಈಗಾಗಲೇ ದರ ಕುಸಿತದಿಂದ ನಷ್ಟವಾಗಿದ್ದು, ಇನ್ನಷ್ಟು ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ರೈತರು ಅಲವೊತ್ತಿಕೊಂಡರು.

ಮಳೆ, ಗಾಳಿಗೆ ರಾಮಸಾಗರ ಗ್ರಾಮದ ವ್ಯಾಪ್ತಿಯಲ್ಲಿ ನಾಲ್ಕು ವಿದ್ಯುತ್ ಕಂಬಗಳು ಬಿದ್ದಿದ್ದು, ಎರಡು ಕಂಬಗಳು ಬಾಗಿವೆ. ಬಳ್ಳಾರಿ ರಸ್ತೆ, ಡಿಪ್ಲೊಮಾ ಕಾಲೇಜು ಬಳಿ ಮರಗಳು ಬಿದ್ದಿವೆ. ಕಂಪ್ಲಿಯ 33 ಕೆವಿ ಎಂವಿಎಸ್ ಸಬ್ ಸ್ಟೇಷನ್‌ನಲ್ಲಿ 63 ಕೆವಿ ವಿದ್ಯುತ್ ಪರಿವರ್ತಕ, ನಡುವಿನ ಮಸೀದಿ ಬಳಿ ವಿದ್ಯುತ್ ಪರಿವರ್ತಕ ಸುಟ್ಟಿವೆ. ಇದರಿಂದ ರಾತ್ರಿಯಿಂದಲೇ ವಿದ್ಯುತ್ ವ್ಯತ್ಯಯವಾಗಿದ್ದರಿಂದ ಕುಡಿವ ನೀರಿನ ಪೂರೈಕೆಯಲ್ಲಿ ತೊಂದರೆಯಾಯಿತು. ಹೊಟೇಲ್‌ಗಳಲ್ಲಿ ವಡೆ, ಇಡ್ಲಿಗೆ ಚಟ್ನಿ ದೊರೆಯದಂತಾಯಿತು. ವಿದ್ಯುತ್ ಆಧಾರಿತ ಕೆಲಸಗಳೆಲ್ಲ ಸ್ಥಗಿತಗೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net