

ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ನಗರದ ಚರಂಡಿಗಳನ್ನು ಸ್ವಚ್ಛಗೊಳಿಸಿ, ತ್ಯಾಜ್ಯ ವಿಲೇವಾರಿ ಮಾಡದ ಕಾರಣ ಈಗ ಮತ್ತೆ ಅಷ್ಟೂ ತ್ಯಾಜ್ಯ ಚರಂಡಿಗೆ ಸೇರುತ್ತಿದೆ.
ಕಳೆದ ಜೂ.20ರಂದು ನಗರಕ್ಕೆ ಭೇಟಿ ನೀಡಿದ್ದ ಲೋಕಾಯುಕ್ತ ಅಧಿಕಾರಿಗಳ ತಂಡ ನಗರದ ಎಂ.ಜಿ. ರಸ್ತೆಯ ಚರಂಡಿಗಳಲ್ಲಿ ಹಲವಾರು ವರ್ಷಗಳಿಂದ ಕಸ ತೆಗೆಯದೆ ನಿರ್ಲಕ್ಷ್ಯ ವಹಿಸಿದ್ದ ನಗರಸಭೆಗೆ ಬಿಸಿ ಮುಟ್ಟಿಸಿ, ಕೂಡಲೇ ಸ್ವಚ್ಛಗೊಳಿಸಿ ತ್ಯಾಜ್ಯ ವಿಲೇವಾರಿ ಮಾಡುವಂತೆ ಸೂಚಿಸಿತ್ತು. ಈ ಬೆನ್ನಲ್ಲೇ ಚರಂಡಿಯ ತ್ಯಾಜ್ಯವನ್ನು ಸ್ವಚ್ಛಗೊಳಿಸಿದ್ದ ನಗರಸಭೆ ತೆಗೆದ ಕಸವನ್ನು ವಿಲೇವಾರಿ ಮಾಡದೆ ಚರಂಡಿ ಪಕ್ಕದಲ್ಲಿ ಬಿಟ್ಟಿತ್ತು.
ಇದುವರೆಗೂ ಕಸ ವಿಲೇವಾರಿ ಆಗಿಲ್ಲ. ಆಸುಪಾಸಿನ ನಿವಾಸಿಗಳು, ಅಂಗಡಿ ಮಾಲೀಕರಿಗೆ ಇದರಿಂದ ಓಡಾಡಲು ತೊಂದರೆಯಾಗುತ್ತಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಗಮನಹರಿಸಿಲ್ಲ. ಈಗ ಮಳೆ ಸುರಿಯುತ್ತಿದ್ದು, ಕಸ ಮತ್ತೆ ಚರಂಡಿ ಸೇರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಆಡಳಿತ ಯಂತ್ರದ ವೈಲ್ಯ
ಚರಂಡಿಯ ಹೂಳು, ಕಸ ತೆಗೆದನಂತರ ಅದನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು. ಆ ಕೆಲಸ ಮಾಡದಿರುವುದರಿಂದ ಕಸ ಮತ್ತೆ ಚರಂಡಿ ಸೇರುತ್ತಿದೆ. ಇದಕ್ಕೆ ಆಕ್ಷೇಪಿಸಿರುವ ಸಾರ್ವಜನಿಕರು, ಈ ರೀತಿ ಕಾಮಗಾರಿ ಮಾಡಿ, ಜನರ ಹಣ ಪೋಲು ಮಾಡುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
’ಕೆರೆಯ ನೀರನ್ನು ಕೆರೆಗೆ ಚೆಲ್ಲು’ ಎಂಬಂತೆ ನಗರಸಭೆ ಆರೋಗ್ಯ ಇಲಾಖೆ ನಿರ್ಲಕ್ಷ್ಯದಿಂದಾಗಿ ಕಸ ಮತ್ತೆ ಚರಂಡಿ ಸೇರುತ್ತಿದೆ. ಇಂತಹ ಕಾಟಾಚಾರದ ಕೆಲಸಗಳಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವೈಫಲ್ಯವೂ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ.
ಮೂಲೆ ಸೇರಿದ ಟಿಪ್ಪರ್‌ಗಳು
ಕಸ ವಿಲೇವಾರಿ ಮಾಡಬೇಕಾದ ಹಲವಾರು ಟಿಪ್ಪರ್‌ಗಳು ನಿರ್ವಹಣೆ ಇಲ್ಲದೆ ಕೆಟ್ಟು ಮೂಲೆ ಸೇರಿವೆ. ಕೆಲವನ್ನು ವರ್ಕ್‌ಶಾಪ್ ಎದುರು ನಿಲ್ಲಿಸಿದ್ದರೆ, ಮತ್ತೆ ಕೆಲವು ವರ್ಕ್‌ಶಾಪ್ ಮಾಲೀಕರಿಗೆ ಬಾಕಿ ಹಣ ಪಾವತಿ ಮಾಡದ ಕಾರಣ ಅಲ್ಲಿಯೇ ತುಕ್ಕು ಹಿಡಿಯುತ್ತಿವೆ. ಇನ್ನೂ ಕೆಲವು ರಿಪೇರಿಯಾಗದೆ ನಗರಸಭೆ ಜಾಗದಲ್ಲಿ ಕೊಳೆಯುತ್ತಿವೆ.
ಎಂ.ಜಿ.ರಸ್ತೆಯ ಹಳೇ ಸಂತೆಗೇಟಿನ ಬಳಿಯಿಂದ ಕೋಲಾರ ವೃತ್ತದವರೆಗೂ ಚರಂಡಿ ನಿರ್ಮಿಸಿ 15 ವರ್ಷ ಕಳೆದಿದೆ. ಇದುವರೆವಿಗೂ ಚರಂಡಿಯಲ್ಲಿ ಕಸ ಎತ್ತಿಲ್ಲ, ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿ ಬಿಸಿ ಮುಟ್ಟಿಸಿದ ನಂತರ ಚರಂಡಿ ಸ್ವಚ್ಛಗೊಳಿಸಿ ತ್ಯಾಜ್ಯವನ್ನು ುಟ್‌ಪಾತ್‌ಗೆ ಹಾಕಿ ನೈರ್ಮಲ್ಯ ಕೆಡಿಸಿದ್ದಾರೆ.
- ರಾಜು, ವರ್ಕ್‌ಶಾಪ್ ಮಾಲೀಕ, ಚಿಂತಾಮಣಿ
ನಗರದ ಬಹುತೇಕ ಚರಂಡಿಗಳಲ್ಲಿ ಹೂಳು ತುಂಬಿದೆ. ನಗರಸಭೆ ಸಮಯಕ್ಕೆ ಸರಿಯಾಗಿ ಚರಂಡಿ ತ್ಯಾಜ್ಯ ತೆಗೆಯದ ಕಾರಣ ಹಲವಾರು ಚರಂಡಿಗಳು ಮುಚ್ಚಿ ಹೋಗಿವೆ. ಮಳೆ ಬಂದರೆ ಚರಂಡಿಯಲ್ಲಿ ಹರಿಯಬೇಕಾದ ನೀರು ರಸ್ತೆಯಲ್ಲಿ ಹರಿಯುತ್ತದೆ. ನಗರಸಭೆ ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
- ವಿಶ್ವನಾಥ್ಆರ್‌ಎಸ್ ಪಕ್ಷದ ಕಾರ್ಯದರ್ಶಿ, ಚಿಂತಾಮಣಿ