ಕುವೆಂಪು ವಾಕ್ಯ ಕೊಕ್​ಗೆ ಆಕ್ರೋಶ

Jnana Degula
Published on

ಬೆಂಗಳೂರು: ಶಾಲೆಗಳಲ್ಲಿ ಹಿಂದು ಧಾರ್ವಿುಕ ಹಬ್ಬಗಳ ಆಚರಣೆಗೆ ನಿರ್ಬಂಧ ವಿಧಿಸಿ ಜನಾಕ್ರೋಶಕ್ಕೆ ಗುರಿಯಾಗಿದ್ದ ಸರ್ಕಾರ, ಇದೀಗ ಮಹಾಕವಿ ಕುವೆಂಪು ವಾಕ್ಯವನ್ನು ತಿರುಚಿರುವುದು ಮತ್ತೊಂದು ಸುತ್ತಿನ ಕೋಲಾಹಲಕ್ಕೆ ಕಾರಣವಾಗಿದೆ. ಸಮಾಜ ಕಲ್ಯಾಣ ಇಲಾಖೆ ಅಧಿನದ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ‘ಜ್ಞಾನದೇಗುಲವಿದು ಕೈಮುಗಿದು ಒಳಗೆ ಬಾ’ ಎಂಬ ಘೋಷವಾಕ್ಯವನ್ನು ‘ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸು’ ಎಂದು ಬದಲಾಯಿಸುವ ಮೂಲಕ ಈ ನೆಲದ ಸಂಸ್ಕೃತಿ ಸಾರುವ ‘ಸರಸ್ವತಿ ಮಂದಿರ’ದ ಪಾವಿತ್ರ್ಯವನ್ನು ಹಾಳು ಮಾಡುವ ಯತ್ನವನ್ನು ಐಎಎಸ್ ಅಧಿಕಾರಿಯೊಬ್ಬರ ಮೂಲಕ ಜಾರಿಗೆ ತರುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷ ಕೆಂಡಕಾರಿದೆ.

ರಾಷ್ಟ್ರಕವಿ ಕುವೆಂಪು ಅವರ ‘ಜ್ಞಾನದೇಗುಲವಿದು...’ ಘೋಷವಾಕ್ಯವು ದಶಕಗಳಿಂದ ಕೋಟ್ಯಂತರ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪ್ರೇರಣೆ ನೀಡಿದೆ. ಸಣ್ಣ ವಯಸ್ಸಿನಲ್ಲಿ ಗುರುವಿನ ಮೂಲಕ ವಿದ್ಯೆ ಕಲಿಸುವ ಆಲಯದಂತಿರುವ ಶಾಲೆಗಳು ಒಂದರ್ಥದಲ್ಲಿ ಜ್ಞಾನಮಂದಿರಗಳೇ ಆಗಿದೆ. ಇಂತಹ ಪವಿತ್ರ, ಪಾವನವಾದ ಜ್ಞಾನಗಂಗೆಯನ್ನು ವಿಧೇಯತೆಯಿಂದ ಒಲಿಸಿಕೊಳ್ಳುವ ನೆಲದ ಸಂಸ್ಕೃತಿ ಬದಲು ‘ಪ್ರಶ್ನಿಸುವ ಉದ್ಧಟತನ’ದ ನಡೆ ವಿದ್ಯಾರ್ಥಿಗಳ ಪಾಲಿಗೆ ಒಗ್ಗದು. ಇದನ್ನು ಅರಿಯದ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್ ತನ್ನ ಮೌಖಿಕ ಆದೇಶದ ಮೇರೆಗೆ ವಸತಿ ಶಾಲೆಗಳಲ್ಲಿ ಘೋಷವಾಕ್ಯ ಬದಲಾವಣೆ ಹುಕುಂ ಮಾಡಿರುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ.

ಸಿದ್ಧಾಂತ ಹೇರಿಕೆ ಸಲ್ಲ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಈಗಾಗಲೇ ಜಾತ್ಯತೀತ ಹೆಸರಿನಲ್ಲಿ ಹಲವು ಆದೇಶವನ್ನು ಹೊರಡಿಸಿ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಶಾಲೆಗಳಲ್ಲಿ ಧಾರ್ವಿುಕ ಆಚರಣೆಗಳಿಗೆ ನಿರ್ಬಂಧ ವಿಧಿಸಿ, ಬಳಿಕ ಆದೇಶವನ್ನು ಹಿಂಪಡೆದಿತ್ತು. ಮೊದಲನೇ ಪುಟದಿಂದ...

ಈಗ ಅಧಿಕಾರಿಗಳ ಮೂಲಕ ಅವರ ಸ್ಥಾನಮಾನವನ್ನು ದುರ್ಬಳಕೆ ಮಾಡಿಕೊಂಡು ಪಕ್ಷದ ಸಿದ್ಧಾಂತವನ್ನು ವಿದ್ಯಾರ್ಥಿ ಸಮೂಹದ ಮೇಲೆ ಹೇರಲು ಹೊರಟಿರುವುದು ಭವಿಷ್ಯದ ಪ್ರಜೆಗಳಾದ ಮಕ್ಕಳನ್ನು ದಾರಿ ತಪ್ಪಿಸುವಂತಾಗಿದೆ. ಇಂತಹ ಸಾಧುವಲ್ಲದ ಕೆಲಸವನ್ನು ಮಾಡದ ಹೊರತು ಶಿಕ್ಷಣ ಕ್ಷೇತ್ರವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುವತ್ತ ಏಕೆ ಗಮನ ಹರಿಸಬಾರದು ಎಂಬ ಪ್ರಶ್ನೆಯನ್ನು ಪಾಲಕರು ಸರ್ಕಾರಕ್ಕೆ ಮರುಪ್ರಶ್ನಿಸಲು ಮುಂದಾಗಿದ್ದಾರೆ.

ಮಣಿವಣ್ಣನ್ ವಜಾಕ್ಕೆ ಆಗ್ರಹ:

ನಾಡು-ನುಡಿ, ಭಾಷೆ ತಿಳಿಯದ ಕೆಲ ಐಎಎಸ್ ಅಧಿಕಾರಿಗಳು ತಾವು ಆಡಿದ್ದೇ ಆಟ ಎಂಬಂತೆ ವರ್ತಿಸುತ್ತಿದ್ದಾರೆ. ಇಂತಹ ಅಧಿಕಾರಿಗಳ ಆಟಾಟೋಪಕ್ಕೆ ಮೂಗುದಾರ ಹಾಕದ ಸರ್ಕಾರದ ಮೌನ ವರ್ತನೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹಾಲಿ ಪ್ರಕರಣದಲ್ಲಿ ಅಧಿಕಾರಿ ತಪು್ಪ ಮಾಡಿದ್ದರೂ ಅದನ್ನು ಸಮರ್ಥಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಘೋಷವಾಕ್ಯ ಬದಲಾವಣೆ ಪ್ರಸ್ತಾಪ ತಮಗೆ ತಿಳಿದಿಲ್ಲವೆಂದು ಹೇಳುತ್ತಿದೆ. ಅಧಿಕಾರಿಯೇ ಸ್ವಯಂ ತೀರ್ಮಾನ ಕೈಗೊಂಡಿದ್ದಲ್ಲಿ ಈ ರಾದ್ಧಾಂತಕ್ಕೆ ಕಾರಣವಾಗಿರುವ ಮಣಿವಣ್ಣನ್ ಅವರನ್ನು ಅಮಾನತು ಮಾಡುವಂತೆ ಕೂಗು ಎದ್ದಿದೆ.

ಕಾಂಗ್ರೆಸ್ ಸರ್ಕಾರದ ಮನಸ್ಥಿತಿ ಅನುಷ್ಠಾನಗೊಳಿಸಲು ತಮಿಳು ಮೂಲದ ಐಎಎಸ್ ಅಧಿಕಾರಿ ಮಣಿವಣ್ಣನ್ ಯಾವುದೇ ಸರ್ಕಾರಿ ಆದೇಶ ಹೊರಡಿಸದೆ ಕುವೆಂಪು ಅವಮಾನಿಸುವ ಕೆಲಸ ಮಾಡಿದ್ದಾರೆ. ಅವರ ಬರಹ ಅಳಿಸಲು ಕಾರಣರಾಗಿದ್ದಾರೆ. ಸರ್ಕಾರ ತಪ್ಪು ತನ್ನದಲ್ಲ ಎನ್ನುವುದಾದರೆ ಮಣಿವಣ್ಣನ್ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಲಿ.

-ಆರ್.ರಘು ಹಿಂದುಳಿದ ವರ್ಗಗಳ ಬಿಜೆಪಿ ಮೋರ್ಚಾ ಅಧ್ಯಕ್ಷ

ರಾಜ್ಯ ಸರ್ಕಾರ ಕೈಮುಗಿಯುವುದನ್ನು ಕೋಮು ಭಾವನೆ ಎಂದು ಪರಿಗಣಿಸಿ ಮಕ್ಕಳಲ್ಲಿರುವ ನಮ್ಮ ಆಚಾರ-ವಿಚಾರ, ಸಂಸ್ಕೃತಿಯನ್ನು ನಾಶಪಡಿಸುವ ಷಡ್ಯಂತ್ರ ರೂಪಿಸಿದಂತಿದೆ. ಕರೋನಾ ವೇಳೆ ಬ್ರಿಟನ್ ಅಧ್ಯಕ್ಷ ಸೇರಿ ವಿಶ್ವದ ವಿವಿಧ ರಾಷ್ಟ್ರಗಳ ಮುಖ್ಯಸ್ಥರು ನಮಸ್ಕಾರ ಮಾಡುವ ಮೂಲಕ ಸ್ವಾಗತ ಸಂಸ್ಕೃತಿಯನ್ನು ಪಾಲಿಸಿದ್ದರು. ಇದು ನಮ್ಮ ದೇಶದ ಸಂಸ್ಕೃತಿಯ ಸಂಕೇತ. ಇದನ್ನು ತೊಡೆದುಹಾಕುವ ಕಾಂಗ್ರೆಸ್ ನಡೆ ಖಂಡನೀಯ.

- ಮೋಹನ್ ಗೌಡ, ಹಿಂದು ಜನಜಾಗೃತಿ ಸಮಿತಿ ವಕ್ತಾರ

ಇದ್ದದ್ದೇನು?

ಜ್ಞಾನದೇಗುಲವಿದು ಕೈಮುಗಿದು ಒಳಗೆ ಬಾ

ಬದಲಾಗಿದ್ದು?

ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸು

ರಾಷ್ಟ್ರಕವಿ ಕುವೆಂಪುಗೆ ಅವಮಾನ?

ಜಾತ್ಯತೀತ ವಿಷಯದಲ್ಲಿ ಸದಾ ಕುವೆಂಪು ಅವರನ್ನು ಧ್ಯಾನಿಸುವ ಕಾಂಗ್ರೆಸ್ ಸರ್ಕಾರವು ಈಗ ಕುವೆಂಪು ಅವರನ್ನು ಅವಮಾನಿಸಿದೆ. ವಿದ್ಯಾರ್ಥಿಗಳಿಗೆ ಪ್ರಶ್ನಿಸುವ ಮನೋಭಾವವನ್ನು ಕಲಿಸಬೇಕೇ ಹೊರತು ಪರಂಪರೆಯನ್ನು ಪ್ರಶ್ನಿಸುವಂತೆ ಉತ್ತೇಜಿಸಬಾರದು. ಕನ್ನಡಕ್ಕೆ ಮೊದಲ ಜ್ಞಾನಪೀಠ ತಂದುಕೊಡುವ ಮೂಲಕ ಕುವೆಂಪು ರಾಜ್ಯದ ಅಸ್ಮಿತೆಯಾಗಿದ್ದಾರೆ. ಆದರೆ, ಯಾವುದೋ ಒಬ್ಬ ಅಧಿಕಾರಿಯ ಉದ್ಧಟತನದಿಂದ ಕುವೆಂಪು ಅವರಿಗೆ ಅವಮಾನ ಮಾಡಲಾಗಿದ್ದು, ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಈ ವಿಷಯವನ್ನು ರಾಜಕೀಯಗೊಳಿಸದೆ ಗಂಭೀರವಾದ ಕ್ರಮ ಕೈಗೊಳ್ಳಬೇಕು ಎಂಬುದು ಶಿಕ್ಷಣ ತಜ್ಞರ ಆಗ್ರಹ.

ಕಲಾಪದಲ್ಲಿ ಚಕಮಕಿ

ಬೆಂಗಳೂರು: ‘ಘೋಷವಾಕ್ಯ ಬದಲಾವಣೆ’ ವಿಧಾನ ಮಂಡಲದ ಉಭಯಸದನಗಳಲ್ಲೂ ಸೋಮವಾರ ಗದ್ದಲ, ಕಾವೇರಿದ ಚರ್ಚೆಗೆ ಕಾರಣವಾಯಿತು. ಸರ್ಕಾರದ ಮೇಲೆ ಮುಗಿಬಿದ್ದ ಪ್ರತಿಪಕ್ಷಗಳು ಸರ್ಕಾರ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನಿಸಿದೆ ಎಂದು ಆರೋಪಿಸಿತು. ವಿಪಕ್ಷ ನಾಯಕ ಆರ್. ಅಶೋಕ್ ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದರೆ, ಶಾಸಕ ಬಿ.ವೈ. ವಿಜಯೇಂದ್ರ ಧ್ವನಿಗೂಡಿಸಿ, ಘೋಷವಾಕ್ಯ ಬದಲಾಯಿಸಿ ಮಕ್ಕಳ ಮನಸ್ಸಿನಲ್ಲಿ ಸಂಘರ್ಷ ಹುಟ್ಟು ಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಟೀಕಿಸಿದರು.

ಸರ್ಕಾರದಲ್ಲಿ ಎಲ್ಲ ಅಧಿಕಾರ ಅಧಿಕಾರಿಗಳ ಕೈಯಲ್ಲೇ ಇದೆ. ಮುಖ್ಯಮಂತ್ರಿ, ಸಚಿವರನ್ನು ಕೇಳದೆ ಅಧಿಕಾರಿ ಗಳು ಬೇಕಾಬಿಟ್ಟಿಯಾಗಿ ಆದೇಶ ಮಾಡುತ್ತಿದ್ದಾರೆ. ವಸತಿ ಶಾಲೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ವಾಣಿಯನ್ನು ಬದಲಿಸಿದ ಅಧಿಕಾರಿಯ ವಿರುದ್ಧ ಸರ್ಕಾರ ಕೂಡಲೇ ಕ್ರಮವಹಿಸಬೇಕು.

| ಆರ್.ಅಶೋಕ್ ಪ್ರತಿಪಕ್ಷ ನಾಯಕ

ಜ್ಞಾನ ದೇಗು ಲವಿದು ಕೈಮುಗಿದು ಒಳಗೆ ಬಾ ಎನ್ನುವ ವಾಕ್ಯವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಧೈರ್ಯವಾಗಿ ಪ್ರಶ್ನಿಸಿ ಎಂದು ಬದಲಾಯಿಸಿದೆ. ಇದು ವಿದ್ಯಾರ್ಥಿಗಳಲ್ಲಿ ಸಂಘರ್ಷದ ವಾತಾ ವರಣ ಸೃಷ್ಟಿಸಲಿದೆ. ಕಾಂಗ್ರೆಸ್ ಸಂಘರ್ಷ ಉಂಟುಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದೆ.

| ಬಸವರಾಜ ಬೊಮ್ಮಾಯಿ ಮಾಜಿ ಸಿಎಂ

ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂಬ ಘೋಷವಾಕ್ಯ ತೆಗೆದು ಹಾಕುವಂತೆ ಯಾವುದೇ ಆದೇಶವನ್ನು ಸರ್ಕಾರ ಹೊರಡಿಸಿಲ್ಲ, ನನ್ನ ಪ್ರಕಾರ ಇದೊಂದು ವಿವಾದದ ಅಂಶವೇ ಅಲ್ಲ.

| ಡಾ.ಎಚ್​ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ

ರಾಷ್ಟ್ರಕವಿ ಕುವೆಂಪು ಅವರ ತತ್ವ ಮತ್ತು ಸಿದ್ಧಾಂತ ಗಳನ್ನು ಪ್ರಚಾರ ಮಾಡು ತ್ತಿರುವುದು ಕಾಂಗ್ರೆಸ್ ಸರ್ಕಾರ, ಆದರೆ ಮಾಡಲು ಕೆಲಸವಿಲ್ಲದ ಬಿಜೆಪಿ ಎಲ್ಲದರಲ್ಲೂ ತಪು್ಪ ಹುಡುಕುವ ಕೆಲಸ ಮಾಡುತ್ತಿದೆ.

| ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net