ಕುಡಿತದ ಚಟ ಬಿಟ್ಟಾಗ ನೆಮ್ಮದಿ ಜೀವನ

gan (6)
Published on

ಕುಂದಾಪುರ: ನಾಲಗೆಗೆ ರುಚಿ ಕೊಡುತ್ತೆ ಅಥವಾ ಅಮಲಿನ ಸಂತೋಷ ನೀಡುತ್ತೆ ಅಂತ ಕುಡಿತದ ಚಟಕ್ಕೆ ಬಿದ್ದಲ್ಲಿ ಆರ್ಥಿಕ, ಆರೋಗ್ಯ, ಸಾಮಾಜಿಕ ಗೌರವದ ನಷ್ಟವಾಗುವುದಲ್ಲದೆ ಕೌಟುಂಬಿಕವಾಗಿಯೂ ನೆಮ್ಮದಿ ಕಳೆದುಕೊಳ್ಳಬೇಕಾಗುತ್ತದೆ. ಕುಡಿತದ ಚಟಕ್ಕೆ ಒಳಗಾದವರು ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಕುಡಿತ ತ್ಯಜಿಸಿ ನೆಮ್ಮದಿಯ ಜೀವನ ಕಂಡುಕೊಳ್ಳಬೇಕೆಂದು ಹೈದರಬಾದ್ ಉದ್ಯಮಿ, ಮದ್ಯವರ್ಜನ ಶಿಬಿರದ ಗೌರವಾಧ್ಯಕ್ಷ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಹೇಳಿದರು.

ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಕುಂದಾಪುರ ತಾಲೂಕು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ ಕುಂದಾಪುರ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ ಉಜಿರೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಗ್ರಾಪಂ ಚಿತ್ತೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಆಲೂರು, ಕೊಲ್ಲೂರು ಆರಕ್ಷಕರ ಠಾಣೆ ಸಹಯೋಗದೊಂದಿಗೆ ಚಿತ್ತೂರಲ್ಲಿ ನಡೆದ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿದರು.

ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಸದಾಶಿವ ಶೆಟ್ಟಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಉಮೇಶ್ ಶೆಟ್ಟಿ ಶಾನ್ಕಟ್ಟು ಅಧ್ಯಕ್ಷತೆ ವಹಿಸಿದ್ದರು. ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಅತುಲ್ ಕುಮಾರ್ ಶೆಟ್ಟಿ, ಚಿತ್ತೂರು ಗ್ರಾಪಂ ಅಧ್ಯಕ್ಷ ರವೀಂದ್ರ ಶೆಟ್ಟಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ರಟ್ಟಾಡಿ, ವಂಡ್ಸೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಂಜಯ್ಯ ಶೆಟ್ಟಿ ಸಬ್ಲಾಡಿ, ಆಲೂರು ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹರ್ಕೂರು ಮಂಜಯ್ಯ ಶೆಟ್ಟಿ, ಚಿತ್ರಕೂಟ ಆಯುರ್ವೇದ ಆಸ್ಪತ್ರೆಯ ಡಾ.ರಾಜೇಶ್ ಬಾಯರಿ, ವನದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ವಂಡಬಳ್ಳಿ ಜಯರಾಮ ಶೆಟ್ಟಿ, ಜನಜಾಗೃತಿ ವೇದಿಕೆ ಚಿತ್ತೂರು ವಲಯ ಅಧ್ಯಕ್ಷ ನಾಗಪ್ಪ ಕೊಠಾರಿ, ಆಲೂರು ಗ್ರಾಪಂ ಅಧ್ಯಕ್ಷ ರಾಜೇಶ್ ದೇವಾಡಿಗ, ಕೆರಾಡಿ ಗ್ರಾಪಂ ಅಧ್ಯಕ್ಷ ಸುದರ್ಶನ ಶೆಟ್ಟಿ ಕೆರಾಡಿ, ನಿವೃತ್ತ ಶಿಕ್ಷಕ ಎಸ್.ಮಹಾಬಲ ಶೆಟ್ಟಿ, ಚಿತ್ತೂರು ವಲಯ ಅಧ್ಯಕ್ಷ ಶಿವರಾಮ ಪೂಜಾರಿ, ಇಡೂರು ಗ್ರಾಪಂ ಅಧ್ಯಕ್ಷೆ ಆಶಾ ಜಯರಾಮ ಆಚಾರ್ಯ ಉಪಸ್ಥಿತರಿದ್ದರು.

ಯೋಜನಾಧಿಕಾರಿ ಉಮೇಶ್ ಶೆಟ್ಟಿ ಎಚ್. ಸ್ವಾಗತಿಸಿದರು. ಕರಾವಳಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತಾಡಿದರು. ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ರೇಣುಕಾ ವಂದಿಸಿದರು. ವಂಡ್ಸೆ ವಲಯದ ಮೇಲ್ವಿಚಾರಕ ಚಂದ್ರ ಮಧುವನ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net