

ಕರಿಯಪ್ಪ ಅರಳೀಕಟ್ಟಿ ರಾಣೆಬೆನ್ನೂರ
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರು ವಿಶ್ರಾಂತಿ ಪಡೆಯಲು ರಾಣೆಬೆನ್ನೂರ-ಹಾವೇರಿ ನಡುವಿನ ಛತ್ರ ಗ್ರಾಮದ ಬಳಿ ಅರಣ್ಯ ಇಲಾಖೆ ವತಿಯಿಂದ ಸುಂದರ ಉದ್ಯಾನ ನಿರ್ವಿುಸಲಾಗಿದ್ದು, ಸದ್ಯದಲ್ಲೇ ಉದ್ಘಾಟನೆಗೊಳ್ಳಲಿದೆ.
ಸಸ್ಯೋದ್ಯಾನ ಯೋಜನೆ ಯಡಿ 60 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಿ ‘ಸಾಲು ಮರದ ತಿಮ್ಮಕ್ಕ ಉದ್ಯಾನ’ ಎಂದು ಹೆಸರಿಡಲಾಗಿದೆ. ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಬೆಳಗಾವಿ, ದಾವಣಗೆರೆ, ತುಮಕೂರ ಬಳಿ ಈಗಾಗಲೇ ಮೂರು ಉದ್ಯಾನಗಳಿವೆ. ಸಾಲು ಮರದ ತಿಮ್ಮಕ್ಕ ಉದ್ಯಾನ ನಾಲ್ಕನೆಯದು.
ಸುಂದರ ತಾಣ: ಉದ್ಯಾನದಲ್ಲಿ ಮಕ್ಕಳಿಗೆ ಆಟವಾಡಲು ಜೋಕಾಲಿ, ಜಾರು ಬಂಡಿ ಮತ್ತಿತರ ಆಟೋಪಕರಣಗಳನ್ನು ಅಳವಡಿಸಲಾಗಿದೆ. ಉದ್ಯಾನದ ಸುತ್ತಲೂ ಬಗೆ ಬಗೆಯ ಸಸಿ ನೆಡಲಾಗಿದೆ. ಆಯಾಸ, ದಣಿವಿನಿಂದ ಬಳಲಿದ ಜೀವಕ್ಕೆ ಉದ್ಯಾನದಲ್ಲಿನ ಸಾಲು ಮರಗಳು ಹಿತಾನುಭವ ನೀಡುತ್ತವೆ.
ಗಮನ ಸೆಳೆಯುವ ಚಿತ್ರಗಳು: ಉದ್ಯಾನ ಪ್ರವೇಶ ದ್ವಾರದಲ್ಲಿ ಕಲ್ಲು ಬಂಡೆ ಮೇಲೆ ಪ್ರಾಣಿಗಳ ಚಿತ್ರಗಳಿವೆ. ಚಿತ್ರದುರ್ಗದ ಕಲಾವಿದ ನಾಗರಾಜ ಅವರ ಕೈಯಲ್ಲಿ ಅರಳಿದ ಚಿತ್ರಗಳು ಉದ್ಯಾನದ ಅಂದವನ್ನು ಹೆಚ್ಚಿಸಿವೆ.
ದರ ನಿಗದಿ?: ‘ಉದ್ಯಾನ ನಿರ್ವಹಣೆ ಹಿನ್ನೆಲೆಯಲ್ಲಿ ತಲಾ ಒಬ್ಬರಿಗೆ 10 ರಿಂದ 20 ರೂ.ವರೆಗೆ ಪ್ರವೇಶ ದರ ನಿಗದಿ ಮಾಡಲಿದ್ದೇವೆ. ಈ ಬಗ್ಗೆ ಇನ್ನೂ ಚರ್ಚೆ ನಡೆದಿದೆ’ ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ -4ರಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಹೀಗಾಗಿ, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸುಂದರ ಉದ್ಯಾನ ನಿರ್ವಿುಸಲಾಗಿದೆ. ಮಾಸಾಂತ್ಯದಲ್ಲಿ ಉದ್ಯಾನ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. | ಮಹೇಶ ಮರೆಣ್ಣವರ ವಲಯ ಅರಣ್ಯಾಧಿಕಾರಿಹೆದ್ದಾರಿಯಲ್ಲಿ ನಿರ್ವಿುಸಿದ ಉದ್ಯಾನ ಹೊರಗಿನಿಂದಲೇ ಸುಂದರವಾಗಿ ಕಾಣುತ್ತಿದೆ. ಅಲ್ಲಿಯ ಚಿತ್ರಗಳು ಎಂಥವರನ್ನೂ ಕೈ ಬೀಸಿ ಕರೆಯುತ್ತವೆ. ಮಕ್ಕಳಿಗಂತೂ ಹೇಳಿ ಮಾಡಿಸಿದ ತಾಣವಾಗಿದೆ. ಹೈವೆಯಲ್ಲಿ ಸಂಚರಿಸುವ ಜನ ಕೆಲಕಾಲ ಉದ್ಯಾನದಲ್ಲಿ ವಿಶ್ರಾಂತಿ ಪಡೆದು ಮಕ್ಕಳ ಜತೆ ಆಟವಾಡಿ ಲವಲವಿಕೆಯಿಂದ ಹೋಗಬಹುದಾಗಿದೆ. | ಮಂಜುನಾಥ ಆನೂರ ಪ್ರಯಾಣಿಕ ಹುಬ್ಬಳ್ಳಿ