

ಕೊಳ್ಳೇಗಾಲ: 'ಪಪ್ಪಾ ನಾನು ತುಂಬಾ ಫ್ಯಾಟ್ ಇದ್ದೀನಿ... ಐ ಹ್ಯಾಮ್ ಸಾರಿ ಪಪ್ಪಾ...' ಎಂದು ತಂದೆ ಮೊಬೈಲ್ಗೆ ಮಧ್ಯರಾತ್ರಿ ಸಂದೇಶ ರವಾನಿಸಿದ ಮಗ, ಅಪಾರ್ಟ್ಮೆಂಟ್ನಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪಟ್ಟಣದ ಭಾವನಾ ಹಾರ್ಡ್ವೇರ್ ಮಾಲೀಕ ಜೆ.ಎಸ್.ರಾಮ್ಮೋಹನ್ ಹಾಗೂ ಆರ್.ಆಶಾ ಮೋಹನ್ ದಂಪತಿಯ ಏಕೈಕ ಪುತ್ರ ಜೆ.ಆರ್.ಅಂಜನ್(18) ಮೃತ ದುರ್ದೈವಿ. ಈತ ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಕನಕಪುರ ರಸ್ತೆಯ ಕೋಣನಕುಂಟೆಯಲ್ಲಿ ದೊಡ್ಡಪ್ಪ ಚೇತನ್ ಅವರ ಅಪಾರ್ಟ್ಮೆಂಟ್ನಲ್ಲಿ ಒಬ್ಬನೇ ವಾಸವಿದ್ದ. ಸೋಮವಾರ ಮುಂಜಾನೆ 3.30ರ ಸಮಯದಲ್ಲಿ ತಂದೆ ಮೊಬೈಲ್ಗೆ "ಪಪ್ಪಾ ನಾನು ತುಂಬಾ ಫ್ಯಾಟ್.. ಐ ಹ್ಯಾಮ್ ಸಾರಿ ಪಪ್ಪಾ'. ಎಂದು ಸಂದೇಶ ಹಾಗೂ ವಿಡಿಯೋವೊಂದನ್ನು ಕಳುಹಿಸಿದ್ದಾನೆ.
ಬೆಳಗ್ಗೆ ಎದ್ದು ಮೊಬೈಲ್ ನೋಡಿದ ಪಾಲಕರಿಗೆ ಬರಸಿಡಿಲು ಬಡಿದಂತಾಗಿದೆ. ಕೂಡಲೇ ಅಂಜನ್ಗೆ ಫೋನ್ ಮಾಡಿದರೂ ಕರೆ ಸ್ವೀಕರಿಸಿಲ್ಲ. ಇದೇ ವೇಳೆಗೆ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ ಬೇರೆಯವರು ಯುವಕನ ತಂದೆ ರಾಮ್ಮೋಹನ್ಗೆ ಫೋನ್ ಮಾಡಿ ನಡೆದಿರುವ ಘಟನೆ ತಿಳಿಸಿದ್ದಾರೆ.
ತಕ್ಷಣ ಪಾಲಕರು ಬೆಂಗಳೂರಿಗೆ ಹೋಗಿ ನೋಡಿದಾಗ ಮಹಡಿ ಮೇಲಿಂದ ಕೆಳಗೆ ಬಿದ್ದಿರುವ ಸ್ಥಿತಿಯಲ್ಲಿ ಅಂಜನ್ ಮೃತದೇಹ ಸಿಕ್ಕಿದೆ. ಈ ಸಂಬಂಧ ಕೋಣನಕುಂಟೆ ಠಾಣೆಯಲ್ಲಿ ಪಾಲಕರು ದೂರು ದಾಖಲಿಸಿದ್ದಾರೆ. ಅಂಜನ್ ಕೊನೆಯದಾಗಿ ಕಳುಹಿಸಿರುವ ವಿಡಿಯೋವನ್ನು ಪೊಲೀಸರಿಗೆ ತಂದೆ ನೀಡಿದ್ದಾರೆ.
ಆರು ಕಾಲು ಅಡಿ ಎತ್ತರ ಹಾಗೂ ಗಾತ್ರದಲ್ಲಿ ದಪ್ಪಗಿದ್ದ ಹಿನ್ನೆಲೆ ಅಂಜನ್ ಅನ್ನು ಎಲ್ಲರೂ 'ನೀನು ತುಂಬಾ ದಪ್ಪ ಇದ್ದೀಯಾ' ಎಂದು ಚುಡಾಯಿಸುತ್ತಿದ್ದರು. ಕೆಲ ತಿಂಗಳ ಹಿಂದೆ ತನ್ನ ಪಾಲಕರ ಬಳಿ ಅಂಜನ್ ನೋವು ತೋಡಿಕೊಂಡಿದ್ದ. ಇದಕ್ಕೆಲ್ಲಾ ನೊಂದುಕೊಳ್ಳಬಾರದು. ನಮ್ಮ ಕುಟುಂಬದಲ್ಲಿ ಎಲ್ಲರೂ ದಪ್ಪಗಿದ್ದಾರೆ. ನಿನ್ನ ಓದಿನ ಕಡೆ ಹೆಚ್ಚು ಗಮನಹರಿಸು ಎಂದು ಪಾಲಕರು ಸಮಾಧಾನ ಮಾಡಿದ್ದರು. ಆದರೆ ಅಂಜನ್ ಸಾವಿನ ಮನೆಯ ಕದ ತಟ್ಟಿದ್ದು ದುರಂತ.
ಮರಣೋತ್ತರ ಪರೀಕ್ಷೆ ಬಳಿಕ ಕೊಳ್ಳೇಗಾಲದ ದಾಸನಪುರ ಗ್ರಾಮದ ಬಳಿಯ ಕಾವೇರಿ ನದಿ ತೀರದಲ್ಲಿ ಸೋಮವಾರ ಸಂಜೆ ಅಂತ್ಯಕ್ರಿಯೆ ನಡೆದಿದೆ. ಇದ್ದೊಬ್ಬ ಮಗನನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.