ಯುವಕ-ಯುವತಿ ಪ್ರೇಮ ಪ್ರಕರಣದಲ್ಲಿ ಏನೂ ತಪ್ಪು ಮಾಡದ ರೈತನಿಗೆ ಜೈಲು ಶಿಕ್ಷೆ! ಬೆಳಗಾವಿಯಲ್ಲಿ ವಿಚಿತ್ರ ಘಟನೆ

New Project(5)
Published on

ಬೆಳಗಾವಿ: ಯುವಕ-ಯುವತಿಯ ಪ್ರೇಮ ಪ್ರಕರಣದಲ್ಲಿ ಏನೂ ತಪ್ಪು ಮಾಡದ ರೈತನೋರ್ವ ಶಿಕ್ಷೆ ಅನುಭವಿಸುವಂತಾಗಿದೆ.

ಬೆಳಗಾವಿ ತಾಲೂಕಿನ ಹೊನಗಾ ಗ್ರಾಮದ ರೈತ ನಾಮದೇವ ದುಡುಮ್​ ಅನ್ಯಾಯಕ್ಕೊಳಗಾಗಿದ್ದು, ಜೈಲು ಶಿಕ್ಷೆ ಅನುಭವಿಸಿದ ರೈತ. ಗುಗರನಟ್ಟಿ ಮತ್ತು ಕಡೋಲಿ ಗ್ರಾಮದ ಯುವಕ-ಯುವತಿ ಪ್ರೀತಿಸಿ ವರ್ಷದ ಹಿಂದೆ ಮುಂಬೈಗೆ ಹಾರಿದ್ದರು. ಯುವತಿಯೊಂದಿಗೆ ಓಡಿಹೋದ ಯುವಕನ ಅಣ್ಣ ಮತ್ತು ರೈತ ನಾಮದೇವ ದುಡಮ್​ ಸ್ನೇಹಿತರು. ಆ ಕಾರಣಕ್ಕೆ ಯುವಕ ಮತ್ತು ಯುವತಿಯರ ಮನೆಗೆ ಹೋಗಿ ರಾಜಿ-ಸಂಧಾನದಲ್ಲಿ ಭಾಗಿಯಾಗಿದ್ದರು. 2021ರ ಮಾ.1ರಂದು ಓಡಿ ಹೋಗಿದ್ದ ಜೋಡಿ ಮತ್ತೆ ಗ್ರಾಮಕ್ಕೆ ಮರಳಿತ್ತು. ಕೆಲ ತಿಂಗಳ ಬಳಿಕ ಮದುವೆ ಮಾಡಿದರಾಯಿತು ಎಂದು ಎರಡೂ ಕಡೆಯವರು ನಿರ್ಧರಿಸಿದ್ದರು. ಆದರೆ, ನಂತರದಲ್ಲಿ ಯುವತಿ ಮನೆಯವರು ತಿರುಗಿ ಬಿದ್ದಿದ್ದು, ನಾಮದೇವ ಮೇಲೆ ದೂರು ದಾಖಲಿಸಿದ್ದಾರೆ. ಹೊಲದ ಗುಡಿಸಲಲ್ಲಿಯೇ ನಾಮದೇವ ಇಬ್ಬರನ್ನೂ ಕೂಡಿಟ್ಟಿದ್ದಾರೆ ಎಂದು ಬಿಳಿ ಹಾಳೆಯಲ್ಲಿ ಗುಡಿಸಲಿನ ಡೈಗ್ರಾಮ್​ ಹಾಕಿ ಪೊಲೀಸರು ಎಫ್​ಐಆರ್​ ದಾಖಲಿಸಿದ್ದರು.

ಪ್ರಕರಣ ಸಂಬಂಧ 2021ರ ನ.19ರಿಂದ 2022ರ ಜ.28ರ ವರೆಗೆ ನಾಮದೇವ ಜೈಲುವಾಸ ಅನುಭವಿಸಿದ್ದಾರೆ. ಓಡಿ ಹೋಗಿದ್ದ ಯುವಕ ಈಗ ಪ್ರತ್ಯಕ್ಷನಾಗಿ ಪ್ರಕರಣದಲ್ಲಿ ನಾಮದೇವ ಅವರದ್ದು ಏನೂ ತಪ್ಪಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದಾನೆ. ಇತ್ತ ಏನೂ ತಪ್ಪು ಮಾಡದೆ ಶಿಕ್ಷೆಗೆ ಒಳಗಾದ ರೈತನ ಪರವಾಗಿ ನಾಮದೇವನ ಪತ್ನಿ ಸುನೀತಾ ಹಾಗೂ ಗ್ರಾಮಸ್ಥರು ಜಿಲ್ಲಾಧಿಕಾರಿ ಬಳಿ ನ್ಯಾಯಕ್ಕೆ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net