More

  ಶಿವಯೋಗ ಸಾಧಕರಿಗೆ ನೆಮ್ಮದಿ ಪ್ರಾಪ್ತಿ

  ಸೊರಬ: ಶಿವಯೋಗ ಸಾಧನೆ ಮಾಡುವ ಸಾಧಕನು ಯಾವುದಕ್ಕೂ ಚಿಂತಿಸದೇ ಶಿವಯೋಗಾನಂದದಲ್ಲಿ ಇರುತ್ತಾನೆ ಎಂದು ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

  ತಾಲೂಕಿನ ಗುಂಜನೂರು ಗ್ರಾಮದಲ್ಲಿ ಪುರಾತನವಾದ ಪೆದ್ದಯ್ಯ ಹಾಗೂ ಸಿದ್ದಯ್ಯ ಮಠದ ಸ್ವಾಮಿಗಳ ಗದ್ದುಗೆಯ ಪೂಜಾ ವಾರ್ಷಿಕೋತ್ಸವದ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದರು.
  ಆತ್ಮ ಸಾಧನೆ ಮಾಡುತ್ತಾ ಜಂಗಮರು ಆಧ್ಯಾತ್ಮದಲ್ಲಿ ಅನುಭವಕ್ಕೆ ಬಂದ ಕೆಲ ಸಿದ್ಧಿ ಹಾಗೂ ತತ್ವಗಳನ್ನು ಲೋಕಕಲ್ಯಾಣಾರ್ಥ ಭಕ್ತರಿಗೆ ಕರುಣಿಸುತ್ತ ಸಂಚರಿಸಿ ಗದ್ದುಗೆಯಲ್ಲಿ ವಿರಾಜಾಮಾನರಾಗಿದ್ದಾರೆ. ನಾಮ, ಸೀಮೆಗಳಿಲ್ಲದ ಅವರ ಲೀಲಾವಿನೋದವನ್ನು ನೋಡಿ ಭಕ್ತರು ಅವರನ್ನು ಕೆಲ ಬಾರಿ ಪೆದ್ದಯ್ಯ ಎಂತಲೂ, ಮತ್ತೆ ಕೆಲವು ಬಾರಿ ಸಿದ್ದಯ್ಯ ಎಂತಲೂ ಕರೆದಿರಬಹುದು. ಎಲ್ಲರೂ ಗುರುವಿನ ಅಗತ್ಯವನ್ನು ಮನಗಂಡು ಮಠದ ಕಾಯಕಲ್ಪಕ್ಕೆ ಮುಂದಾಗಿರುವುದು ಶ್ಲಾಘನೀಯ. ಮಠದ ಆವರಣವನ್ನು ಹಸಿರೀಕರಣ ಮಾಡಬೇಕು ಎಂದು ತಿಳಿಸಿದರು.
  ದುಗ್ಲಿ ಹಾಗೂ ಕಡೇನಂದಿಹಳ್ಳಿ ತಪೋಕ್ಷೇತ್ರದ ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶಿವಯೋಗ ಸಾಧಕನು ಇಷ್ಟಲಿಂಗ ಪೂಜಿಸುತ್ತ ಆತನ ಹಸ್ತ, ಪಾದ, ನೇತ್ರ, ವಾಕ್ ಹಾಗೂ ಪಾದವು ಪಂಚ ಪುರುಷಗಳಾಗುತ್ತವೆ. ಇದರಿಂದ ಭಕ್ತರ ಕಲ್ಯಾಣವನ್ನು ಗುರುಗಳು ಮಾಡುತ್ತಾರೆ. ಇದು ಶಿವಯೋಗದ ಉದ್ದೇಶವಾಗಿದೆ ಎಂದರು.
  ಮಲ್ಲಿಕಾರ್ಜುನ ಅರಮನಿ ಮಠ ಮತ್ತು ಸಂಗಡಿಗರಿಂದ ರುದ್ರಾಭಿಷೇಕ ಹೋಮ ಹವನಾದಿಗಳು ನಡೆದವು. ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಗ್ರಾಮದ ಸೌಖ್ಯ, ಸಾಕ್ಷಿ ಹಾಗೂ ಸುಖಿ ಅವರನ್ನು ಸನ್ಮಾನಿಸಲಾಯಿತು.
  ವೀರಶೈವ ಲಿಂಗಾಯತ ಸಮಾಜದ ಸತೀಗೌಡ, ಉಮಾಪತಿ ಗೌಡ, ಸುರೇಂದ್ರ ಗೌಡ, ಸೋಮು ಗೌಡ, ಷಣ್ಮುಖ ಗೌಡ, ಬಾಲಚಂದ್ರ ಗೌಡ, ಬಸವೇಶ್ವರ ಯುವಕ ಸಮಿತಿ ಸದಸ್ಯರು, ಗುಂಜನೂರು ಗ್ರಾಮಸ್ಥರು, ಭಕ್ತರು ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts