

ಮೈಸೂರು: ಕರೊನಾ ಹಿನ್ನೆಲೆ ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ ನಡೆಯುತ್ತಿದೆ. ತಾಂತ್ರಿಕ ದೋಷ, ನೆಟ್ವರ್ಕ್ ಸಮಸ್ಯೆಯಿಂದ ಕಿರಿಕಿರಿ ಸಹಜ. ಆದರೆ ಬೇಕಂತಲೇ ಉಪನ್ಯಾಸಕರಿಗೆ ಮಕ್ಕಳೇ ಕ್ಷಣಕ್ಷಣಕ್ಕೂ ಕಿರಿಕಿರಿ ಮಾಡಿದ್ರೆ ಪಾಠ ಮಾಡುವುದಾದರೂ ಹೇಗೆ?
ಇಂತಹದ್ದೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ ಮೈಸೂರಿನ ಮಹಜನ ಕಾಲೇಜಿನ ಫೇಸ್ಬುಕ್ನಲ್ಲಿ ಅಪ್ಲೋಡ್ ಆಗಿರುವ ವಿಡಿಯೋ! ಹೌದು, ಮಹಜನ ಕಾಲೇಜಿನ ಉಪನ್ಯಾಸಕರೊಬ್ಬರು ಆನ್ಲೈನ್ ಮೂಲಕ ತರಗತಿ ನಡೆಸುವಾಗ ಉಪನ್ಯಾಸದ ಮಧ್ಯೆ ಮಧ್ಯೆ ಹಾಡುಗಳನ್ನು ಹಾಕಿ ತರಗತಿ ಮಾಡಲು ಬಿಡದಂತೆ ಕೆಲ ವಿದ್ಯಾರ್ಥಿಗಳು ಕೀಟಲೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಕೀಟಲೆಗೆ ಹೈರಾಣಾದ ಉಪನ್ಯಾಸಕರು ಕಾಲೇಜು ಆಡಳಿತ ಮಂಡಳಿಯ ಗಮನಕ್ಕೆ ಈ ವಿಷಯವನ್ನ ತಂದಿದ್ದಾರೆ. ಉಪನ್ಯಾಸಕರಿಗೆ ತೊಂದರೆ ಕೊಟ್ಟಿರುವ ವಿಡಿಯೋ ಹಂಚಿಕೊಂಡಿರುವ ಕಾಲೇಜು ಆಡಳಿತ ಮಂಡಳಿ, 'ವಿದ್ಯಾರ್ಥಿಗಳೇ ಈ ರೀತಿ ಮಾಡಬೇಡಿ' ಎಂದು ಮನವಿ ಮಾಡಿದೆ.