ಒಂದು ಬಾರಿಯ ರಕ್ತದಾನ ಮೂವರಿಗೆ ಜೀವದಾನ

08SPT1
Published on

ಸೋಮವಾರಪೇಟೆ: ಒಂದು ಬಾರಿ ರಕ್ತದಾನ ಮಾಡಿದರೆ ಮೂರು ಜೀವಗಳನ್ನು ಉಳಿಸಬಹುದು ಎಂದು ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ತಿಳಿಸಿದರು.


ಇಲ್ಲಿನ ತಥಾಸ್ತು ಸಂಸ್ಥೆ ಮತ್ತು ಜಿಲ್ಲಾ ರಕ್ತನಿಧಿ ವತಿಯಿಂದ ಶ್ರೀ ಶಿವಕುಮಾರ ಸ್ವಾಮೀಜಿ ಸ್ಮರಣಾರ್ಥ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.


ರಕ್ತದಾನ ಮಾಡುವುದರಿಂದ ಅಮೂಲ್ಯ ಜೀವ ಉಳಿಸಿದಂತಾಗುತದೆ. ಅಪಘಾತ ಮುಂತಾದ ತುರ್ತು ಸಂದರ್ಭಗಳಲ್ಲಿ ರಕ್ತ ನೀಡಲು ಮುಂದಾಗಬೇಕು ಎಂದರು.


111 ವರ್ಷಗಳ ಕಾಲ ಬದುಕಿ, ಜಾತಿ, ಮತ ನೋಡದೆ ಸರ್ವ ಜನಾಂಗದ ಮಕ್ಕಳಿಗೂ ಶಿಕ್ಷಣ, ದಾಸೋಹ ಹಾಗೂ ಆಶ್ರಯ ನೀಡಿದ ಕಾಯಕಯೋಗಿ ಶಿವಕುಮಾರ ಸ್ವಾಮಿಗಳ ದಾಸೋಹ ದಿನದ ನೆನಪಿನಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.


ಜಿಲ್ಲಾ ರಕ್ತನಿಧಿ ಮುಖ್ಯಸ್ಥ ಡಾ.ಕರುಂಬಯ್ಯ ಮಾತನಾಡಿ, ರಕ್ತದಾನ ಶ್ರೇಷ್ಠವಾದದ್ದು, ಆದ್ದರಿಂದ ಆರೋಗ್ಯವಂತ ವ್ಯಕ್ತಿಗಳು ವರ್ಷಕ್ಕೆ ಮೂರು ನಾಲ್ಕು ಬಾರಿ ರಕ್ತ ದಾನ ಮಾಡಬಹುದು ಎಂದರು.


ರಕ್ತದಾನದಿಂದ ದಾನಿಗಳ ಆರೋಗ್ಯ ವೃದ್ಧಿಸುತ್ತದೆ. ಅಪಪ್ರಚಾರ ಹಾಗೂ ಮೂಢನಂಬಿಕೆಗಳನ್ನು ನಂಬದೆ ರಕ್ತದಾನ ಮಾಡಬೇಕು. ರಕ್ತಕ್ಕೆ ಯಾವುದೇ ಪರ್ಯಾಯ ಇಲ್ಲದ ಹಿನ್ನೆಲೆಯಲ್ಲಿ ರಕ್ತದಾನ ಅನಿವಾರ್ಯವಾಗಿದೆ. ಗ್ರಾಮೀಣ ಭಾಗದಲ್ಲೂ ಹೆಚ್ಚಿನ ಜನರು ರಕ್ತದಾನ ಮಾಡುತ್ತಿದ್ದಾರೆ ಎಂದು ಹೇಳಿದರು.
ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಶಿವಪ್ರಸಾದ್, ವೈದ್ಯರಾದ ಸತೀಶ್, ತಥಾಸ್ತು ಸಂಸ್ಥೆ ಅಧ್ಯಕ್ಷ ಉದಯ್, ಕಾನೂನು ಸಲಹೆಗಾರರಾದ ರೂಪಾ, ಶಿವಕುಮಾರ ಸ್ವಾಮೀಜಿ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಎಸ್.ಮಹೇಶ್, ಪಟ್ಟಣ ಪಂಚಾಯಿತಿ ಸದಸ್ಯ ಮೃತ್ಯುಂಜಯ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net